ಕಸ ವಿಂಗಡಣೆ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ದಂಡ, ಮೂಲಸೌಕರ್ಯ ಸ್ಥಗಿತ ಎಚ್ಚರಿಕೆ

ಕಸ ವಿಂಗಡಣೆ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ದಂಡ, ಮೂಲಸೌಕರ್ಯ ಸ್ಥಗಿತ ಎಚ್ಚರಿಕೆ Mandatory Waste Segregation: Warning of Fines and Suspension of Services for Violations

ಲೋಕದರ್ಶನ ವರದಿ

ಹಾವೇರಿ, ಜು. ೩: ಹಾವೇರಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕರು, ವ್ಯಾಪಾರಸ್ಥರು, ಕಲ್ಯಾಣ ಮಂಟಪಗಳು, ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಎಲ್ಲ ಘನತ್ಯಾಜ್ಯ ಉತ್ಪಾದಕರು ತಮ್ಮ ಕಸವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ನಗರಸಭೆಯ ಆಟೋ ಟಿಪ್ಪರ್ಗೆ ನೀಡುವುದು ಕಡ್ಡಾಯವಾಗಿದೆ ಎಂದು ಪೌರಾಯುಕ್ತ ಎಚ್. ಕಾಂತರಾಜು ತಿಳಿಸಿದ್ದಾರೆ. 

ನಗರದಲ್ಲಿ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದ ಅವರು, ಘನತ್ಯಾಜ್ಯ ವಸ್ತುಗಳ (ನಿರ್ವಹಣೆ ಮತ್ತು ನಿರ್ವಹಣಾ) Æ್ತ್ಖ್ಕµ್ಛ್ದ–೨೦೨೬ ಏಪ್ರಿಲ್ ೧ರಿಂದ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು. 

ನಗರಸಭೆ ಸೂಚಿಸಿರುವಂತೆ ತ್ಯಾಜ್ಯವನ್ನು ಈ ಕೆಳಗಿನ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಬೇಕು: ಹಸಿ ತ್ಯಾಜ್ಯ: ಆಹಾರ, ತರಕಾರಿ, ಹಣ್ಣು, ಹೂವು, ತೋಟದ ತ್ಯಾಜ್ಯ ಹಾಗೂ ಗೊಬ್ಬರವಾಗುವ ಜೈವಿಕ ತ್ಯಾಜ್ಯ.  ಒಣ ತ್ಯಾಜ್ಯ: ಪ್ಲಾಸ್ಟಿಕ್, ಬಟ್ಟೆ, ಕಾಗದ, ರಬ್ಬರ್, ಲೋಹ ಸೇರಿದಂತೆ ಮರುಬಳಕೆ ಸಾಧ್ಯವಿರುವ ವಸ್ತುಗಳು. ಸ್ಯಾನಿಟರಿ ತ್ಯಾಜ್ಯ: ಬಳಸಿದ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್, ಕಾಂಡೋಮ್ ಮೊದಲಾದವು.  ವಿಶೇಷ ತ್ಯಾಜ್ಯ: ಪೇಂಟ್ ಡಬ್ಬಿಗಳು, ಔಷಧ ಬಾಟಲಿಗಳು, ಅವಧಿ ಮೀರಿದ ಔಷಧಗಳು, ಟ್ಯೂಬ್ ಲೈಟ್, ಬ್ಯಾಟರಿ, ಸೂಜಿ, ಸಿರಿಂಜ್ ಸೇರಿದಂತೆ ಅಪಾಯಕಾರಿ ತ್ಯಾಜ್ಯ.  

ನಿಯಮ ಉಲ್ಲಂಘಿಸಿ ಕಸವನ್ನು ವಿಂಗಡಿಸದೇ ನೀಡುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ನೀರು ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ನಗರಸಭೆ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸ್ವಚ್ಛ ನಗರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಪೌರಾಯುಕ್ತರು ಮನವಿ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ರಮೇಶ್ ಮುಂಜೋಜಿ ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.