ಮನೆಗಳಿಗೆ ವಿತರಿಸಿರುವ ಗಣತಿ ನಮೂನೆ ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸಿ: ಸಿಇಒ ಹಾರೀಸ್ ಸುಮೇರ್

ಮನೆಗಳಿಗೆ ವಿತರಿಸಿರುವ ಗಣತಿ ನಮೂನೆ ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸಿ: ಸಿಇಒ ಹಾರೀಸ್ ಸುಮೇರ್  Mandatorily fill out and submit the census forms distributed to households: CEO Haris Sumer

ಮನೆಗಳಿಗೆ ವಿತರಿಸಿರುವ ಗಣತಿ ನಮೂನೆ ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸಿ: ಸಿಇಒ ಹಾರೀಸ್ ಸುಮೇರ್  

ಬಳ್ಳಾರಿ 16: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಅಂಗವಾಗಿ ಮನೆಮನೆಗೆ ವಿತರಿಸಲಾಗಿರುವ ಪೂರ್ವಮುದ್ರಿತ ಭಾವಚಿತ್ರ ಹೊಂದಿರುವ **‘ಗಣತಿ ನಮೂನೆ’**ಯನ್ನು ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ತಿಳಿಸಿದರು.  

ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ನಗರದ ಮೊಹಮ್ಮದಿಯಾ ಹೈಸ್ಕೂಲ್ನಲ್ಲಿ ಗುರುವಾರ ಆಯೋಜಿಸಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಜಿಲ್ಲೆಯಲ್ಲಿ ಇದುವರೆಗೆ ಶೇ.30ರಿಂದ 40ರಷ್ಟು ಮಾತ್ರ ಗಣತಿ ನಮೂನೆಗಳು ಸಲ್ಲಿಕೆಯಾಗಿದ್ದು, ಇನ್ನೂ ಶೇ.60ರಷ್ಟು ಜನರು ನಮೂನೆಗಳನ್ನು ಸಲ್ಲಿಸಿಲ್ಲ. ನಿಗದಿತ ಅವಧಿಯಲ್ಲಿ ನಮೂನೆ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ವಿಳಂಬ ಮಾಡದೆ ನಮೂನೆಗಳನ್ನು ಸಲ್ಲಿಸಬೇಕು ಎಂದು ಮನವಿ ಮಾಡಿದರು.  

ಆಗಸ್ಟ್‌ 10ರವರೆಗೆ ಅವಕಾಶ  

ಗಣತಿ ನಮೂನೆ ಸಲ್ಲಿಕೆಗೆ ಇದ್ದ ಗಡುವನ್ನು ಆಗಸ್ಟ್‌ 10ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಬಹುದು ಎಂದು ತಿಳಿಸಿದರು.  

ಪ್ರತಿ ಗಣತಿ ನಮೂನೆಯಲ್ಲಿ ಸಂಬಂಧಿತ ಬೂತ್ ಮಟ್ಟದ ಅಧಿಕಾರಿಯ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಲಾಗಿದ್ದು, ಯಾವುದೇ ಸಂದೇಹಗಳಿದ್ದರೆ ಅವರನ್ನು ನೇರವಾಗಿ ಸಂಪರ್ಕಿಸಬಹುದು. ಸ್ಥಳಾಂತರಗೊಂಡವರು ತಮ್ಮ ಹೆಸರನ್ನು ಹಳೆಯ ಮತದಾರರ ಪಟ್ಟಿಯಿಂದ ತೆಗೆದು ಹೊಸ ಸ್ಥಳದ ಪಟ್ಟಿಗೆ ಸೇರಿಸಿಕೊಳ್ಳಬೇಕು. ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದೂ ಅಷ್ಟೇ ಮುಖ್ಯ ಎಂದು ಹೇಳಿದರು.  

ವಿದ್ಯಾರ್ಥಿಗಳು ತಮ್ಮ ಪೋಷಕರು, ನೆರೆಹೊರೆಯವರು ಹಾಗೂ ಸಂಬಂಧಿಕರಿಗೆ ಗಣತಿ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸುವಂತೆ ಜಾಗೃತಿ ಮೂಡಿಸಬೇಕು. ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದೇ ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.  

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರ ಮಾತನಾಡಿ, 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವ ಉದ್ದೇಶದಿಂದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.  

ಜುಲೈ 29ರ ನಂತರ ಸಾರ್ವಜನಿಕರು ಆನ್ಲೈನ್ ಮೂಲಕ ಫಾರಂ-6 ಭರ್ತಿ ಮಾಡಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ, ಬಳ್ಳಾರಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಬಾರೆಕರ್, ಮೊಹಮ್ಮದಿಯಾ ಶಾಲಾ-ಕಾಲೇಜು ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮುಜಾಮಿಲ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.