ಮಂಗಳೂರು, ನ.12 : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಲೇಡಿಹಿಲ್ ಸಂತ ಅಲೋಶಿಯಸ್ ಶಾಲೆಯಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ನಳಿನ್, ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ನಲ್ಲಿ ಒಳಜಗಳ ನಡೆದಿದ್ದು, ಇದು ಬಿಜೆಪಿಗೆ ವರದಾನವಾಗಲಿದೆ. ಹಾಗಾಗಿ ಈ ಬಾರಿ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ...ಐವನ್ ಡಿಸೋಜಾ, ಕಾಮತ್ ಮತದಾನ : ಮಾಜಿ ಶಾಸಕ ಜೆ ಆರ್ ಲೋಬೋ ಬೆಳಿಗ್ಗೆ ಬೆಂದೂರ್ ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ ಮತ ಚಲಾಯಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ವೆಲೆನ್ಸಿಯಾ ಸೆಂಟ್ ಮೇರಿಸ್ ಶಾಲೆಗೆ ಆಗಮಿಸಿ ಮತದಾನ ಮಾಡಿದರು. ಮಣ್ಣಗುಡ್ಡ ಗಾಂಧಿನಗರ ಶಾಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಪತ್ನಿ ವೃಂದಾ ಕಾಮತ್ ಅವರೊಂದಿಗೆ ತೆರಳಿ ಮತದಾನ ಮಾಡಿದರು. ನಂತರ ಮಾತನಾಡಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.