ದೈನಂದಿನ ಕಾರ್ಯದಲ್ಲಿ ಒತ್ತಡ ನಿಭಾಯಿಸಿ: ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ

ದೈನಂದಿನ ಕಾರ್ಯದಲ್ಲಿ ಒತ್ತಡ ನಿಭಾಯಿಸಿ: ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ Manage stress in daily work: Psychiatrist Dr. Chandrashekar Halingale

ಲೋಕದರ್ಶನ ವರದಿ 

ಕಾಗವಾಡ 22: ಮನುಷ್ಯರ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ಮಾನಸಿಕ ಅಸ್ವಸ್ಥತೆ ಮತ್ತು ವ್ಯಸನಗಳು ಎರಡೂ ವೇಗವಾಗಿ ಹೆಚ್ಚಾಗುತ್ತಿವೆ. ಸಕಾಲಿಕ ಚಿಕಿತ್ಸೆ ಮತ್ತು ಸೂಕ್ತ ಸಮಾಲೋಚನೆಯಿಂದ ಅವುಗಳನ್ನು ನಿವಾರಿಸಬಹುದೆಂದು ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ ಹೇಳಿದ್ದಾರೆ. ಅವರು, ಇತ್ತಿಚಿಗೆ ಮಹಾರಾಷ್ಟ್ರದ ಸಾಂಗಲಿ ನಗರದಲ್ಲಿ ಅಂಗವಿಕಲ ಸೇವಾ ಕೇಂದ್ರ ಸಾಂಗಲಿ ಮತ್ತು ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರ, ಮಿರಜ ಇವುಗಳ ಸಹಯೋಗದೊಂದಿಗೆ ದೈಹಿಕ ಅಂಗವೈಕಲ್ಯ, ಮಾನಸಿಕ ವೈಕಲ್ಯ, ಸ್ವಲೀನತೆ, ಒತ್ತಡ, ವ್ಯಸನ ಮತ್ತು ಖಿನ್ನತೆಯಿಂದ ಬಳಲುತ್ತಿರುವ ಜನರಿಗಾಗಿ ಹಮ್ಮಿಮೊಂಡಿದ್ದ ಸಮಾಲೋಚನೆ ಮತ್ತು ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಿದ್ದರು. ಮಾನಸಿಕ ಕಾಯಿಲೆಗಳ ಲಕ್ಷಣಗಳು, ಅವುಗಳ ಪರಿಣಾಮಗಳು ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವ, ಒತ್ತಡ ನಿರ್ವಹಣೆ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಕುರಿತು ಮಾರ್ಗದರ್ಶನ ಮಾಡಿದರು. 

ಡಾ. ಮಾಧುರಿ ವಾಂಗಪತಿ ಮಾತನಾಡಿ, ಆಟಿಸಂ ವಿಷಯದ ಕುರಿತು ಮಾಹಿತಿ ನೀಡುತ್ತ ಆಟಿಸಂ ಎಂದರೇನು. ಅದರ ಲಕ್ಷಣಗಳು, ರೋಗನಿರ್ಣಯ ಪ್ರಕ್ರಿಯೆ ಮತ್ತು ಲಭ್ಯವಿರುವ ಚಿಕಿತ್ಸಾ ವಿಧಾನಗಳ ಮಾಹಿತಿಯನ್ನು ನೀಡಿದರು. ಆರಂಭಿಕ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯು ಮಕ್ಕಳ ಬೆಳವಣಿಗೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು ಎಂದು ತಿಳಿಸಿದರು. ಅಂಗವಿಕಲ ಸೇವಾ ಕೇಂದ್ರದ ಅಧ್ಯಕ್ಷೆ ನಿರ್ಮಲಾ ಕುಲಕರ್ಣಿ ಮಾತನಾಡಿ, ಈ ಶಿಬಿರವು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಹಳಷ್ಟು ಸಹಕಾರಿಯಾಗಲಿದೆ ಎಂದರು.  ಅಂಗವಿಕಲ ಸೇವಾ ಕೇಂದ್ರದ ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ನಿರ್ಮಲ ಆಸ್ಪತ್ರೆಯ ಮನೋಶಾಸ್ತ್ರಜ್ಞರಾದ ನಿಖಿಲ ಖಾಂಡೇಕರ, ಹರೀಶ ಲೋಹಾರ, ಬಾಳಾಸಾಹೇಬ ಪಾಟೀಲ, ಗೀರೀಶ ವಾಘಮಾರೆ, ಸತೀಶ ಹುಳೆ, ಅನೀಶ ಮೋರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.