ಬಯಲು ಶೌಚ ಮುಕ್ತ ಗ್ರಾಮ ನಿರ್ಮಾಣ ಎಲ್ಲರ ಜವಾಬ್ದಾರಿ: ಬಸವರಾಜ ಹೆಗ್ಗನಾಯಕ
Making a village open defecation free is everyone's responsibility: Basavaraja Hegganayak
ಲೋಕದರ್ಶನ ವರದಿ
ಬೆಳಗಾವಿ, ಮೇ.19: ಬಯಲು ಶೌಚ ಮುಕ್ತ ಗ್ರಾಮ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಶೌಚಗೃಹ ಬಳಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ ಕಾರ್ಯದರ್ಶಿ (ಆಡಳಿತ) ಬಸವರಾಜ ಹೆಗ್ಗನಾಯಕ ಹೇಳಿದರು. ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ, ಸಂಪಗಾವ, ಕೆಂಗನೂರು ಹಾಗೂ ವನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಪ್ರಗತಿ ಪರೀಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ನೀರಿನ ಅಭಾವ ಅಥವಾ ಮೂಡ ನಂಬಿಕೆಗಳಂತಹ ಕುಂಟು ನೆಪಗಳನ್ನು ಹೇಳಿಕೊಂಡು ಇಂದಿಗೂ ಬಹುತೇಕ ಜನರು ಶೌಚಗೃಹ ಬಳಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿಸಲು ಸರ್ಕಾರ ಪ್ರತಿಯೊಂದು ಮನೆಗೆ ಶೌಚಗೃಹ ಕಡ್ಡಾಯಗೊಳಿಸಿ, ಆರ್ಥಿಕ ಸಹಾಯಧನ ಸೌಲಭ್ಯವನ್ನೂ ಕಲ್ಪಿಸಿದೆ. ಸಾರ್ವಜನಿಕರು ಇಂತಹ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಹಕರಿಸಲು ತಿಳಿಸಿದರು.
ಇದೇ ವೇಳೆ ಅಧಿಕಾರಿಗಳ ಕಾರ್ಯವೈಖರಿ ಕುರಿತು ಮಾತನಾಡಿದ ಅವರು, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸರ್ಕಾರದ ಪ್ರತಿಯೊಂದು ಜನಪರ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಸತಿ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ತಡ ಮಾಡದೆ ಗುರುತಿಸಬೇಕು. ಈ ಕೆಲಸದಲ್ಲಿ ಅನಗತ್ಯ ವಿಳಂಬ ಧೋರಣೆ ಪ್ರದರ್ಶಿಸಿ ಸಾರ್ವಜನಿಕರಿಗೆ ಕಿರುಕುಳ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣ ಭಾಗದ ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದ ಅವರು, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ವಿಂಗಡಿಸಬೇಕು. ಆ ತ್ಯಾಜ್ಯವನ್ನು ಗ್ರಾಮ ಪಂಚಾಯತಿಯ ಕಸ ಸಂಗ್ರಹಣೆ ವಾಹನಕ್ಕೆ ನೀಡುವ ಮೂಲಕ ಸ್ವಚ್ಛತೆಗೆ ಕೈಜೋಡಿಸಬೇಕು. ಕೇವಲ ವೈಯಕ್ತಿಕ ಸ್ವಚ್ಛತೆ ಮಾತ್ರವಲ್ಲದೆ, ಇಡೀ ಗ್ರಾಮದ ಸೌಂದರ್ಯ ಮತ್ತು ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳು, ಆರೋಗ್ಯ ಕೇಂದ್ರಗಳು ಹಾಗೂ ಪಶು ಆಸ್ಪತ್ರೆಗಳ ಸೇವೆಗಳನ್ನು ಸಾರ್ವಜನಿಕರು ಸಮರ್ಕವಾಗಿ ಬಳಸಿಕೊಂಡು ಸಮೃದ್ಧ ಗ್ರಾಮಗಳನ್ನಾಗಿ ರೂಪಿಸಬೇಕು ಎಂದರು. ವಿದ್ಯಾರ್ಥಿಗಳು ಹಾಗೂ ಯುವಜನತೆ ಸಾರ್ವಜನಿಕ ಗ್ರಂಥಾಲಯಗಳ ಪ್ರಯೋಜನ ಪಡೆದು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳನ್ನು ಜನರು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಮಾತ್ರ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೈಲಹೊಂಗಲ ತಾಪಂ ಇಒ ಸಂಜು ಜುನ್ನೂರ, ವಿಜಯಲಕ್ಷ್ಮೀ ಅನಿಗೋಳ, ಎಚ್.ವಿಶ್ವನಾಥ, ಎಸ್. ಕಲ್ಲೂರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 