ಶ್ರೀ ಭಗವಾನ ಬುದ್ಧ ಜಯಂತಿಗೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ: ಎಡಿಸಿ ಸಿದ್ರಾಮೇಶ್ವರ

                                               ಶ್ರೀ ಭಗವಾನ ಬುದ್ಧ ಜಯಂತಿಗೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ: ಎಡಿಸಿ ಸಿದ್ರಾಮೇಶ್ವರ Make elaborate arrangements for Lord Buddha Jayanti: ADC Sidrameshwara

ಲೋಕದರ್ಶನ ವರದಿ

        ಕೊಪ್ಪಳ  24:  ಮೇ 01 ರಂದು ಜಿಲ್ಲಾ ಕೇಂದ್ರದಲ್ಲಿ ಶ್ರೀ ಭಗವಾನ ಬುದ್ಧ ಜಯಂತಿಯನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಶ್ರೀ ಭಗವಾನ ಬುದ್ಧ ಜಯಂತಿ ಆಚರಣೆ ಕುರಿತು ಕೊಪ್ಪಳ ಜಿಲ್ಲಾಡಳಿತ ಭವನದ ಕೆಸ್ವಾನ್‌-2ರ ಸಭಾಂಗಣದಲ್ಲಿ ಶುಕ್ರವಾರ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಪ್ಪಳ ಜಿಲ್ಲಾ ಮಟ್ಟದ ಶ್ರೀ ಭಗವಾನ ಬುದ್ಧ ಜಯಂತಿ ಆಚರಣೆಯನ್ನು ಮೇ 1ರಂದು ಆಚರಿಸಲಾಗುವುದು. ಅಂದು ಬೆಳಿಗ್ಗೆ 9.30 ಗಂಟೆಗೆ ನಗರದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಶ್ರೀ ಭಗವಾನ ಬುದ್ಧರ ಕುರಿತು ವಿಶೇಷ ಉಪನ್ಯಾಸ ಹಾಗೂ ಇತರೆ ಕಾರ್ಯಕ್ರಮಗಳು ನಡೆಯಲಿವೆ. ಎಂದು ಅವರು ತಿಳಿಸಿದರು. 

ಸಮಾರಂಭ ದಿನದಂದು ಕಾರ್ಯಕ್ರಮದ ಸ್ಥಳದ ಸ್ವಚ್ಛತೆ, ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮತ್ತು ಜಿಲ್ಲಾ ಮಟ್ಟದ ಜಯಂತಿ ಆಚರಣೆ ಕಾರ್ಯಕ್ರಮಕ್ಕಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಜಯಂತಿ ದಿನದಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ, ಎಲ್ಲಾ ಕಚೇರಿಗಳಲ್ಲಿ ಹಾಗೂ ಶಾಲಾ ಮತ್ತು ಕಾಲೇಜುಗಳಲ್ಲಿಯೂ ಶ್ರೀ ಭಗವಾನ ಬುದ್ಧ ಜಯಂತಿ ಆಚರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಯಂತಿ ಕಾರ್ಯಕ್ರಮ ಯಶಸ್ವಿಗೆ ಸಮಾಜದ ಎಲ್ಲಾ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.  ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಅಜ್ಜಪ್ಪ ಸೂಗಲದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮಾಜದ ಮುಖಂಡರಾದ ಯಲ್ಲಪ್ಪ ಬಳಗಾನೂರ, ಸಿದ್ದರಾಮ ಹೊಸಮನಿ, ಅಜಯ ದೊಡ್ಡಮನಿ, ಪಂಪಾಪತಿ ಎಚ್‌.ಬಿ. ಶಿವರಾಜ ಛಲವಾದಿ, ಪರುಶುರಾಮ, ಕಾಶೆಪ್ಪ ಚಲವಾದಿ, ಸತೀಶ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.