ಮಹಾ ಪುರುಷರನ್ನು ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ: ಯತ್ನಾಳ

Mahayogi Mevan Jayanti

ಮಹಾಯೋಗಿ ಮೇವನ ಜಯಂತಿ 

ವಿಜಯಪುರ ಜನವರಿ 19: ಸಮಾಜದಲ್ಲಿರುವಂತಹ ತಪ್ಪು, ದೋಷಗಳನ್ನು ಕವಿತೆ ಹಾಗೂ ವಚನಗಳ ಮೂಲಕ ಅವರ ವಿಚಾರದಾರೆಗಳನ್ನು ಸಮಾಜಕ್ಕೆ ಕೊಟ್ಟಂತಹ ಅನೇಕ ಮಹಾ ಪುರುಷರುಗಳನ್ನು ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ನಗರ ಶಾಸಕರಾದ ಬಸನಗೌಡ ರಾ. ಪಾಟೀಲ(ಯತ್ನಾಳ) ಹೇಳಿದರು. 

ಇಂದು ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಜಾತಿಗಳನ್ನು ಮೀರಿ ಸಮಾಜದಲ್ಲಿ ಬದಲಾವಣೆಯನ್ನು ಮಾಡಿ, ಕ್ರಾಂತಿ ಮಾಡಿದಂತಹ ಸತ್ಪುರುಷರಾದ ನಮ್ಮ ಮಹಾಯೋಗಿ ವೇಮನರು ಹದಿನೈದನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ ಮಹಾಯೋಗಿ ವೇಮನರು. ಅವರ ವಚನಗಳು ಇಂದು ನಮಗೆ ದಾರೀದೀಪವಾಗಿವೆ. ಸುಮಾರು 15 ಸಾವಿರ ಪದ್ಯಗಳನ್ನು ಬರೆದು ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ನಮಗೆ ನೀಡಿದ್ದಾರೆ. ಮಹಾಯೋಗಿಯ ಜೀವನ ಸಂದೇಶ ಎಲ್ಲರಿಗೂ ಪ್ರೇರಣೆಯಾಗಲಿ. ಮಹನೀಯರ ಸಾರಿದ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಹುಟ್ಟಿನಿಂದಲೇ ಎಲ್ಲರೂ ಸಮಾನರು ಎಂದು ಸಾರಿದ ವೇಮನರ ಬದುಕು ನಮಗೆ ಸ್ಪೂರ್ತಿಯಾಗಬೇಕು. ನಮ್ಮ ದೇಶ ಸಿರಿ ಸಂಪತ್ತನ್ನು ಹೊಂದಿದ ದೇಶ ಅದರೊಂದಿಗ ಹೃದಯ ಸಂಪತ್ತನ್ನು ಹೊಂದಿದೆ. ಡಾ. ಅಂಬೇಡ್ಕರ ಅವರು ದೇಶದಲ್ಲಿ ಅಶ್ಪೃಶ್ಯತೆ ಕುರಿತು ತಮ್ಮ ಜೀವನದ ಉದ್ದಕ್ಕೂ ಹೋರಾಡಿ ಎಲ್ಲರೂ ಒಂದೇ ಎಂದು ಜಗತ್ತಿಗೆ ಸಾರಿ ಸಾರಿ ಹೇಳಿದ ಮಹಾನ ನಾಯಕರಾಗಿದ್ದರು. ಇಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ತಿಳಿಸಿದರು. 

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಅಪ್ಪಾಸಿ ಬಬಲೇಶ್ವರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ ಶರಣರ, ಮಹಾಪುರುಷರ, ಸತ್ಪುರುಷರ ಮತ್ತು ದೇಶಕ್ಕಾಗಿ ಬದುಕನ್ನು ಸಮರ​‍್ಿಸಿಕೊಂಡವರ ಜಯಂತಿಗಳು ಈ ದೇಶದಲ್ಲಿ ನಾಡಿನಲ್ಲಿ ಸಾಂಕೇತಿಕವಾಗದೆ ಹೃದಯಪೂರಕವಾಗಿ ಆಚರಿಸುವಂತಾಗಬೇಕು ಅಂದಾಗ ಮಾತ್ರ ಆ ಸಂದೇಶಗಳನ್ನು ಮನೆ ಮನಗಳಲ್ಲಿ ತಲುಪಿಸಲು ಸಾಧ್ಯ. ಎಲ್ಲ ಸಮುದಾಯದವರು ದೇವಾಲಯಗಳನ್ನು ಮಾತ್ರ ಕಟ್ಟದೆ ಧಾರ್ಮಿಕ ಭಾವನೆಗಳ ಜೊತೆಗೆ ಜೀವಂತ ದೇವಾಲಯವಾದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದಲ್ಲಿ ಎಲ್ಲ ಸಮುದಾಯದ ನಿಜವಾದ ದೇವರುಗಳು ಎಲ್ಲ ಮಕ್ಕಳು ಓದಲಿಕ್ಕೆ ಸಾಧ್ಯ. ವೇಮನ ವಚನಗಳನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದ ಹಾಗೂ ಅನುವಾದಿಸಿದ ಸಾಕಷ್ಟು ಸಮಯ ತೆಗೆದುಕೊಂಡ ದಿ.ಎಸ್‌.ಆರ್ ಪಾಟೀಲ್, ಹಾಗೂ ದಿ. ಕೆ.ಎಚ್ ಪಾಟೀಲ್ ಅವರು ವೇಮನರ ಕುರಿತು ಅಧ್ಯಯನ ಹಾಗೂ ಸಂಶೋಧನೆ ಮಾಡಿ ಜನವರಿ 19 ಕ್ಕೆ ವೇಮನ ಜಯಂತಿ ಆಚರಿಸುವಂತೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ಕಳೆ 5 ವರ್ಷಗಳಿಂದ ಸರ್ಕಾರಿ ಜಯಂತಿಯಾಗಿ ಆಚರಿಸಲು ಕ್ರಮ ವಹಿಸಲಾಗುತ್ತಿದೆ ಅವರನ್ನು ಇಂತಹ ಸಂದರ್ಭದಲ್ಲಿ ನಾವು ಸ್ಮರಿಸಬೇಕು ಎಂದು ಅವರು ಹೇಳಿದರು. 

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾ ಯೋಗಿ ವೇಮನರು ಅವರು ಮೂಡನಂಬಿಕೆ, ಡಂಬಾಚಾರವನ್ನು ಸಮಾಜದಿಂದ ಕಿತ್ತೊಗೆದು, ಮೇಲು ಕೀಳು ಎನ್ನುವುದನ್ನು ಹೊಡೆದೊಡಿಸಿದ ಮಹಾನ ಯೋಗಿ ವೇಮನರು ಸಮ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಚರಿತ್ರೆಗಳನ್ನು ಬರೆದವರು ವೇಮನರು ನಮ್ಮ ದೇಶದ ಮಹಾನ ಸಾಕ್ರಟಿಸ್ ಆಗಿದ್ದರು. ಅವರು ಹಾಕಿಕೊಟ್ಟ ಆದರ್ಶ ಹಾಗೂ ಮಾರ್ಗದರ್ಶನಗಳನ್ನು ಮುಂದಿನ ಪೀಳಿಗೆಗೆ ತಿಳಿ ಹೇಳಬೇಕು ಎಂದು ಅವರು ಹೇಳಿದರು. 

ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ (ಯತ್ನಾಳ) ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಸಾಹಿತಿಗಳಾದ ಶಿವಶರಣಪ್ಪ ಶಿರೂರು ವಿಶೇಷ ಉಪನ್ಯಾಸ ನೀಡಿದರು. ಹೇಮರಡ್ಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುರೇಶ ದೇಸಾಯಿ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ತಹಶೀಲ್ಧಾರ ಪ್ರಶಾಂತ ಚನಗೊಂಡ ಉಪಸ್ಥಿತರಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ಸ್ವಾಗತಿಸಿದರು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಿ ವಂದಿಸಿದರು. ಎಚ್‌.ಎ ಮಮದಾಪುರ ಕಾರ್ಯಕ್ರಮವನ್ನು ನಿರೂಪಿಸಿದರು. 

ಸಮಾಜದ ಮುಖಂಡರುಗಳಾದ ವಿ.ಸಿ ನಾಗಠಾಣ, ಪಾಂಡು ಸಹುಕಾರ ದೊಡಮನಿ, ಬಸನಗೌಡ ಪಾಟೀಲ, ಎಸ್‌.ಎಚ್ ನಾಡಗೌಡ, ಕಂಠೀರವ ಕುಲ್ಲೋಳ್ಳಿ, ಮಹಾದೇವಿ ತೆಲಗಿ, ಸರೋಜಿನಿ ಚೌಧರಿ, ಸಂಗು ಸಜ್ಜನ, ಭೀಮರಾಯ ಜಿಗಜಿಣಗಿ, ವಿದ್ಯಾವತಿ ಅಂಕಲಗಿ, ದೇವೇಂದ್ರ ಮೀರೇಕರ, ಸೋಮನಗೌಡ ಕಲ್ಲೂರ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ನಿರ್ದೇಶಕರು, ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.