ಹಾವೇರಿ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಗೆ ವೇಗ ಗ್ರಾಮೀಣ ಕೂಲಿಕಾರರಿಗೆ ಉದ್ಯೋಗ- ದಿನಕ್ಕೆ ರೂ.370 ಕೂಲಿ
Mahatma Gandhi NREGA scheme accelerates in Haveri district, providing employment to rural laborers -
ಲೋಕದರ್ಶನ ವರದಿ
ಹಾವೇರಿ 07 : ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ಪುನಿತ್ ಅವರು ತಿಳಿಸಿದ್ದಾರೆ.
8,600 ಕೂಲಿಕಾರರು: ಜಿಲ್ಲೆಯ 223 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 8,600ಕ್ಕೂ ಅಧಿಕ ಕೂಲಿಕಾರರು ವಿವಿಧ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮಸ್ಥರಿಗೆ ಊರಿನಲ್ಲೇ ಕೆಲಸ ಲಭ್ಯವಾಗುತ್ತಿರುವುದರಿಂದ ವಲಸೆ ಕಡಿಮೆಯಾಗುವ ಜೊತೆಗೆ ಕುಟುಂಬಗಳ ಆರ್ಥಿಕ ಸ್ಥಿತಿಗೂ ನೆರವಾಗುತ್ತಿದೆ.
100 ದಿನಗಳ ಉದ್ಯೋಗ:ನರೇಗಾ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೂಲಿ ಆಧಾರಿತ ಉದ್ಯೋಗ ಒದಗಿಸುವುದಾಗಿದೆ. ಹಾವೇರಿ ಜಿಲ್ಲೆಯಲ್ಲಿ ಈ ಯೋಜನೆಯಡಿ ಕೆರೆ ಅಭಿವೃದ್ಧಿ, ಮಳೆ ನೀರು ಸಂಗ್ರಹಣೆ, ತೋಟಗಾರಿಕೆ, ಹಳ್ಳಿಗಳ ರಸ್ತೆ ಅಭಿವೃದ್ಧಿ, ಶಾಲಾ ಅವರಣ ಸುಧಾರಣೆ, ಅಂಗನವಾಡಿ ಕಟ್ಟಡ ಸುತ್ತಮುತ್ತಲಿನ ಕಾಮಗಾರಿಗಳು, ನೀರು ಹರಿವಿನ ಕಾಲುವೆಗಳ ನಿರ್ಮಾಣ, ಗದ್ದೆ ಬದು ನಿರ್ಮಾಣ ಸೇರಿದಂತೆ ಹಲವು ಶಾಶ್ವತ ಆಸ್ತಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
26 ಸಾವಿರಕ್ಕೂ ಅಧಿಕ ಕಾಮಗಾರಿ: ಜಿಲ್ಲೆಯಲ್ಲಿ ಈಗಾಗಲೇ ಸುಮಾರು 26,000ಕ್ಕೂ ಅಧಿಕ ಕಾಮಗಾರಿಗಳಿಗೆ ಅನುಮೋದನೆಗೊಂಡಿದ್ದು, ಹಂತ ಹಂತವಾಗಿ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಉದ್ಯೋಗಕ್ಕಾಗಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸಲು ಅವಕಾಶವಿದ್ದು, ವಿಶೇಷವಾಗಿ ಮಹಿಳಾ ಕೂಲಿಕಾರರು, ಹಿರಿಯ ನಾಗರಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಯೋಜನೆ ಜೀವನೋಪಾಯದ ಪ್ರಮುಖ ಆಧಾರವಾಗುತ್ತಿದೆ.
ರೂ.370 ಕೂಲಿ: ಪ್ರಸ್ತುತ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಪ್ರತಿದಿನ ರೂ.370/- ಕೂಲಿ ನೀಡಲಾಗುತ್ತಿದೆ. ಸರ್ಕಾರದಿಂದ ನಿಗದಿಪಡಿಸಿದ ಈ ಕೂಲಿ ಮೊತ್ತ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಊರಿನಲ್ಲಿಯೇ ಕೆಲಸ ಮಾಡಿ ಆದಾಯಗಳಿಸುವ ಮೂಲಕ ಕುಟುಂಬದ ಖರ್ಚುಗಳನ್ನು ನಿರ್ವಹಿಸಲು ಹಾಗೂ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಅಗತ್ಯಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತಿದೆ.
ನಮೂನೆ-6ರ ಮೂಲಕ ಉದ್ಯೋಗಕ್ಕೆ ಬೇಡಿಕೆ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಉದ್ಯೋಗ ಬೇಡಿಕೆ ಸ್ವೀಕರಿಸುವ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲಾಗಿದೆ. ಕೂಲಿಕಾರರು ತಮ್ಮ ಗ್ರಾಮ ಪಂಚಾಯತಿಯಲ್ಲಿ ನಮೂನೆ-6 ಸಲ್ಲಿಸುವ ಮೂಲಕ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಬಹುದಾಗಿದೆ. ಅದೇ ರೀತಿ ಕಾರ್ಮಿಕ ಸಂಘಟನೆಗಳು ಸಹ ಕೂಲಿಕಾರರ ಪರವಾಗಿ ನಮೂನೆ-6 ಮೂಲಕ ಕೆಲಸದ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೇಡಿಕೆ ಬಂದ ತಕ್ಷಣ ತ್ವರಿತವಾಗಿ ಕೆಲಸ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನರೇಗಾ ಕುರಿತು ಅರಿವು: ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಮೇಳ, ಜಾಗೃತಿ ಸಭೆಗಳು ಹಾಗೂ ಮನೆಮನೆಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಮೂಲಕ ಗ್ರಾಮೀಣ ಜನರಿಗೆ ನರೇಗಾ ಯೋಜನೆಯ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಗ್ರಾಮಸ್ಥರು ತಮ್ಮ ಹಕ್ಕಿನ ಉದ್ಯೋಗವನ್ನು ಪಡೆದು ಸರ್ಕಾರದ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಶಾಶ್ವತ ಆಸ್ತಿ ನಿರ್ಮಾಣ: ಮಹಾತ್ಮ ಗಾಂಧಿ ನರೇಗಾ ಯೋಜನೆಯು ಕೇವಲ ಉದ್ಯೋಗ ನೀಡುವ ಯೋಜನೆಯಷ್ಟೇ ಅಲ್ಪದೆ, ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಆಸ್ತಿ ನಿರ್ಮಾಣದ ಮೂಲಕ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಮಹತ್ವದ ಕಾರ್ಯಕ್ರಮವಾಗಿದೆ. ನೀರಿನ ಸಂರಕ್ಷಣೆ, ಕೃಷಿ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೂ ಈ ಯೋಜನೆ ಪೂರಕವಾಗಿದೆ. ಹೀಗಾಗಿ ರೈತರು ಮತ್ತು ಗ್ರಾಮೀಣ ಕಾರ್ಮಿಕರಿಗೆ ದೀರ್ಘಕಾಲಿನ ಲಾಭ ದೊರೆಯುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳು ನಿರಂತರ ಪರೀಶೀಲನೆ ನಡೆಸುತ್ತಿದ್ದು, ಅರ್ಹ ಕುಟುಂಬಗಳೆಲ್ಲರೂ ಯೋಜನೆಯ ಪ್ರಯೋಜನ ಪಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ನಿರುದ್ಯೋಗ ಕಡಿಮೆ ಮಾಡಿ, ಜನರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 