ಮಹರ್ಷಿ ವಾಲ್ಮಿಕಿ ಜಯಂತಿ ಪೂರ್ವಭಾವಿ ಸಭೆ : ಸಂಭ್ರಮದ ಆಚರಣೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ

ಮಹರ್ಷಿ ವಾಲ್ಮಿಕಿ ಜಯಂತಿ ಪೂರ್ವಭಾವಿ ಸಭೆ : ಸಂಭ್ರಮದ ಆಚರಣೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ Maharshi Valmiki Jayanti pre-meeting: DC Mohammad Roshan instructs for celebrations

ಬೆಳಗಾವಿ, ಸೆ.18 : ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅಕ್ಟೊಬರ 7 ರಂದು ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚಿಸಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ (ಸೆ.18) ಜರುಗಿದ ಶ್ರೀ ಮಹರ್ಷಿ ವಾಲ್ಮಿಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಂಗೋಳ್ಳಿ ರಾಯಣ್ಣನೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮರಣ ದಂಡನೆ ಹಾಗೂ ಜೀವಾವದಿ ಶಿಕ್ಷೆಗೆ ಒಳಗಾದ ಸಮುದಾಯದ ನಾಯಕರಾದ ಹೆಸರುಗಳನ್ನು ಕಾರ್ಯಕ್ರಮದ ವೇದಿಕೆಗೆ ಇಡಲು ಸೂಚಿಸಿದರು.  

ಕಾರ್ಯಕ್ರಮದ ದಿನದಂದು ಕೋಟೆ ಕೆರೆ ಆವರಣದಿಂದ ಸಂಗೋಳ್ಳಿ ರಾಯಣ್ಣ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರದ ವರೆಗೆ ಭವ್ಯ ಮೆರವಣಿಗೆ ಆಯೋಜಿಸಲು ತೀರ್ಮಾನಿಸಲಾಯಿತು.   

ಮೆರವಣಿಗೆಯಲ್ಲಿ ಜಾನಪದ ಕಲಾ ತಂಡ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ಆಯೋಜಿಸಲು ಕ್ರಮ ಜರುಗಿಸಬೇಕು. ವೇದಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಎಲ್ಲ ಸರಕಾರಿ  ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮ ವಹಿಸಲು ಸೂಚಿಸಿದ ಅವರು  ನಗರದ ಪ್ರವೇಶ ಸ್ಥಳಗಳಲ್ಲಿ  ಸ್ವಾಗತ ಕಮಾನು ನಿರ್ಮಾಣ ಹಾಗೂ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್  ಅಳವಡಿಸಲು ತಿಳಿಸಿದರು.  

ಕಾರ್ಯಕ್ರಮದ ಕುರಿತು ಮುದ್ರಿಸಲಾಗುವ ಆಮಂತ್ರಣ ಪತ್ರಿಕೆಗಳನ್ನು ಶಿಚ್ಟಾಚಾರದ ಪ್ರಕಾರ ಮುದ್ರಿಸಿ ಗಣ್ಯರುಗಳಿಗೆ ಸಾಕಷ್ಟು ಮುಂಚಿತವಾಗಿ ತಲುಪಿಸುವ ಕಾರ್ಯವಾಗಬೇಕು. ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮಿಕಿ ಅವರ ಜೀವನ ಸಂದೇಶಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಅಂತಿಮಗೊಳಿಸಲು ಸೂಚಿಸಿದರು.  

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ ಸೇರಿದಂತೆ ಸರಕಾರಿ ಕಚೇರಿ, ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಮವನ್ನು ಆಚರಿಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗುವದು ಎಂದರು.  

ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಲು ತೀರ್ಮಾನಿಸಲಾಯಿತು. ತಾಲೂಕುಗಳಲ್ಲಿ ತಹಶೀಲ್ದಾರರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನಿರ್ದೆಶನ ನೀಡಲಾಗುವದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಉದ್ಯೋಗ ಮೇಳ ಆಯೋಜಿಸಲು ಕ್ರಮವಹಿಸಲಾಗುವುದು ಎಂದರು.  

ಸಭೆಯಲ್ಲಿ ಪೋಲಿಸ ಆಯುಕ್ತರಾದ ಬೊರಸೆ ಗುಲಾಬರಾವ್ ಭೂಷಣ, ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ, ಸೇರಿದಂತೆ ವಿವಿಧ ಇಲಾಖೆಗಳ ಅಧಕಾರಿಗಳು ಹಾಜರಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಸಮುದಾಯದ ಮುಖಂಡರು, ಗಣ್ಯರು ಮಹರ್ಷಿ ವಾಲ್ಮಿಕಿ ಜಯಂತಿ ಅರ್ಥಪೂರ್ಣ ಆಚರಣೆಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಿದರು.