ಮಹಾರಾಷ್ಟ್ರ : ಆತ್ಮಹತ್ಯೆಗೆ ಯತ್ನಿಸಿದ ಸತ್ಯಶೋಧಕ ಸೇನಾ ನಾಯಕಿ

ಔರಂಗಾಬಾದ್‍, ಜೂನ್ 13,ರಾಜ್ಯ ಕೈಗಾರಿಕಾ ಸಚಿವ ಸುಭಾಸ್ ದೇಸಾಯಿ ಅವರ ಕಾರಿನ ಮುಂದೆ ಸತ್ಯಶೋದಕ ಸೇನಾ ಮಹಿಳಾ ಜಿಲ್ಲಾ ಮುಖ್ಯಸ್ಥೆ ಆಮ್ರಪಾಲಿ ಹಿವಾಲೆ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಶೆಂದ್ರಾ ಡಿಎಂಐಸಿ ಪ್ರದೇಶದಲ್ಲಿ ಎರಡು ಖಾಸಗಿ ಥರ್ಮಾಕೋಲ್ ಘಟಕ ಸ್ಥಾಪನೆ ವಿರೋಧಿಸಿ ಹಿವಾಲೆ ಸಚಿವರೆದುರು ಪ್ರತಿಭಟಿಸುವ ಸಂದರ್ಭದಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಸಚಿವ ಸುಭಾಸ್ ದೇಸಾಯಿ ಶುಕ್ರವಾರ ಕೋವಿಡ್ 19 ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಅಚಾತುರ್ಯ ಜರುಗಿದೆ. ಡಿಎಂಐಸಿಯಲ್ಲಿ ಸ್ಥಾಪನೆಯಾಗಿರುವ ಥರ್ಮಾಕೋಲ್ ಕಂಪನಿಗಳಿಂದಾಗಿ ಈ ಪ್ರದೇಶದ ನಿವಾಸಿಗಳ ಆರೋಗ್ಯಕ್ಕೆ ಅಪಾಯವಿದೆ ಎಂದು ಆರೋಪಿಸಿದ ಹಿವಾಲೆ, ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಿಲ್ಲಿಸಿದ್ದ ಸಚಿವರ ಕಾರಿನ ಮುಂದೆ ಮಲಗಿ ಪ್ರತಿಭಟಿಸಿದರು. ಈ ಹಠಾತ್ ಘಟನೆಯು ಗದ್ದಲಕ್ಕೆ ಕಾರಣವಾಯಿತು. ಕೊನೆಗೆ ಪೊಲೀಸರು ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು, ಅನಾಹುತವನ್ನು ತಪ್ಪಿಸಲಾಯಿತು.