ಮಧುರಚೆನ್ನರ ಜೀವನವೇ ಆಧ್ಯಾತ್ಮವಾಗಿತ್ತು: ಜಗದೀಶ ಗಲಗಲಿ

ಮಧುರಚೆನ್ನರ ಜೀವನವೇ ಆಧ್ಯಾತ್ಮವಾಗಿತ್ತು: ಜಗದೀಶ ಗಲಗಲಿ  Madhurachenna's life was spiritual: Jagadish Galagali

ವಿಜಯಪುರ 01: ಲೌಕಿಕ ಮತ್ತು ಪಾರಮಾರ್ಥವನ್ನು ಸಮಾನವಾಗಿ ಸ್ವೀಕರಿಸಿದವರು ಮಧುರಚೆನ್ನರು. ತತ್ವಜ್ಞಾನಿ ಅರವಿಂದರ ಪ್ರಭಾವಕ್ಕೊಳಗಾಗಿ ಅನುಭಾವಿ ಕವಿಗಳಾದರು. ಮಧುರಚೆನ್ನರ ಜೀವನವೇ ಆಧ್ಯಾತ್ಮವಾಗಿತ್ತು. ಆಧ್ಯಾತ್ಮವೇ ಅವರ ಜೀವನವಾಗಿತ್ತು. ಎಂದು ವಿಶ್ರಾಂತ ಬ್ಯಾಂಕ್ ಮ್ಯಾನೇಜರ್ ಹಾಗೂ ಚಿಂತಕ ಜಗದೀಶ ಗಲಗಲಿ ಹೇಳಿದರು.  

ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರವು ಚಿಂತನ ಸಾಂಸ್ಕೃತಿಕ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡ ಅನುಭಾವಿಗಳು ಮರುಭೆಟ್ಟಿ (6) ಹಾಗೂ ನನ್ನನಲ್ಲ ಅನುವಾದಿತ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಅನುಭಾವದ ನುಡಿಗಳನ್ನಾಡುತ್ತಾ ವಿ.ಕೆ.ಗೋಕಾಕ, ರಂ.ಶ್ರೀ.ಮುಗಳಿ, ದ.ರಾ.ಬೇಂದ್ರೆ, ಬಿ.ಎಂ.ಶ್ರೀಯರಂಥ ಸಾಹಿತ್ಯ ದಿಗ್ಗಜರ ಮೆಚ್ಚುಗೆಗೆ ಪಾತ್ರರಾದ ಮಧುರಚೆನ್ನರು ಅನುಭಾವದ ಮೂಲಕ ಕಾವ್ಯದ ರಚನೆ ಮಾಡಿದರು. 1922ರಲ್ಲಿ ಆರಂಭಗೊಂಡ ಹಲಸಂಗಿ ಗೆಳೆಯರ ಬಳಗ ಇಂದಿಗೂ ಸಾಹಿತ್ಯಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರೆಸುತ್ತ ಬಂದಿರುವುದು ವಿಶೇಷ ಎಂದರು.  

ಅನುವಾದಿತ ಗ್ರಂಥದ ಅವಲೋಕನದ ಮಾತುಗಳನ್ನಾಡಿದ ಹಿರಿಯ ಶಿಕ್ಷಣ ತಜ್ಞ ಪ್ರೊ. ಎನ್‌.ಜಿ.ಕರೂರ ಮಧುರಚೆನ್ನರ ಒಡನಾಟದ ಅನುಭವಗಳನ್ನು ಹಂಚಿಕೊಂಡರು ಮತ್ತು ನನ್ನ ನಲ್ಲ ಕೃತಿಯಲ್ಲಿಯ ಆಧ್ಯಾತ್ಮಿಕ ಅಂಶಗಳು ಯಾವ ಕಾಲಕ್ಕೂ ಪ್ರಸ್ತುತ. ಕುಲಕರ್ಣಿಯವರು ಚನ್ನಾಗಿ ಅನುವಾದ ಮಾಡಿದ್ದಾರೆ ಎಂದು ಹೇಳಿದರು.  

‘ನನ್ನ ನಲ್ಲ’ ಕವನ ಸಂಕಲನವನ್ನು ಇಂಗ್ಲಿಷ ಭಾಷೆಗೆ ಅನುವಾದ ಮಾಡಿದ ಡಾ. ಆರ್‌.ಕೆ.ಕುಲಕರ್ಣಿ ಮಾತನಾಡಿ ಯಾವುದೇ ಕನ್ನಡ ಕೃತಿಯನ್ನು ಇಂಗ್ಲಿಷ ಭಾಷೆಗೆ ಅನುವಾದಿಸಬಹುದು. ಆದರೆ ಮಧುರಚೆನ್ನರ ‘ನನ್ನ ನಲ್ಲ’ ಕವನ ಸಂಕಲನ ಇಂಗ್ಲಿಷಿಗೆ ಅನುವಾದಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿರುವ ಆಧ್ಯಾತ್ಮಿಕ ಪದಗಳು ಶಬ್ದಕೋಶದಲ್ಲೂ ಲಭ್ಯವಿಲ್ಲ. ಸಮಗ್ರ ಓದು, ಆಳ ಚಿಂತನೆ ಆಧ್ಯಾತ್ಮಿಕ ಪರಿಕಲ್ಪನೆಯಿಂದ ಭಾಷಾನುವಾದ ಮಾಡಲು ಪ್ರಯತ್ನಿಸಿದ್ದೇನೆ. ಸಣ್ಣ ಹಳ್ಳಿಯಲ್ಲಿ ಜನಿಸಿದ ಮಧುರಚೆನ್ನರು 22 ಭಾಷೆಯನ್ನು ಬಲ್ಲ ಪರಿಣಿತರಾಗಿದ್ದರು. ಕವಿ, ಚಿಂತಕ, ಕಾರಣೀಪುರುಷ, ವಿಭೂತಿ ಪುರುಷ ಮಧುರಚೆನ್ನರು ಬೆಳಗು, ಆತ್ಮಶೋಧ, ಪೂರ್ವರಂಗ, ಕಾಳರಾತ್ರಿಯಂತಹ ಶ್ರೇಷ್ಠ ಕೃತಿಗಳನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.  

ಬಿ.ಆರ್‌.ಬನಸೋಡೆ ಪ್ರಾರ್ಥಿಸಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿ ಪರಿಚಯಿಸಿದರು. ಡಾ. ಎಂ.ಎಸ್‌.ಮದಭಾವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಭಾಸ ಕನ್ನೂರ ನಿರೂಪಿಸಿದರು. ಡಾ. ಮಾಧವ ಗುಡಿ ವಂದಿಸಿದರು.  

ಸಮಕುಲಾಧಿಪತಿ ಡಾ. ವಾಯ್‌.ಎಂ.ಜಯರಾಜ, ಡಾ. ಆರ್‌.ಬಿ.ಕೊಟ್ನಾಳ, ಆರ್‌.ಎಸ್‌.ಭೋವಿ, ಸಂಗಮೇಶ ಬದಾಮಿ, ವಿ.ಸಿ.ನಾಗಠಾಣ, ಡಾ. ಜಿ.ಡಿ.ಗೋಟ್ಯಾಳ, ಗಂಗಾಧರ ಸಾಲಕ್ಕಿ, ಡಾ. ವಿ.ಎಸ್‌.ಬಾಗಾಯತ್, ಕಡೆಮನಿ, ಸಾಲಿ, ಮ.ಗು.ಯಾದವಾಡ, ವಿದ್ಯಾವತಿ ಅಂಕಲಗಿ ಜಂಬುನಾಥ ಕಂಚ್ಯಾಣಿ, ದಾಕ್ಷಾಯಣಿ ಬಿರಾದಾರ, ವಿದ್ಯಾವತಿ ಅಂಕಲಗಿ, ನೂತನ ಬ್ಯಾಕೋಡ, ಶಶಿಧರ ಶಿರಹಟ್ಟಿ, ವಿಠಲ ತೇಲಿ, ವಿದ್ಯಾಧರ ಸಾಲಿ, ಪಿ.ಎಸ್‌.ಕಡೇಮನಿ, ದೊಡ್ಡಣ್ಣ ಬಜಂತ್ರಿ, ಡವಳಗಿಮಠ ಮುಂತಾದವರು ಉಪಸ್ಥಿತರಿದ್ದರು.