ಸಂಸದ ಕಟೀಲ್ ವೆನ್ಲಾಕ್ ಆಸ್ಪತ್ರೆಗೆ ಭೇಟಿ : ವದಂತಿಗೆ ಕಿವಿಕೊಡದಿರಲು ಮನವಿ

ಸಂಸದ ಕಟೀಲ್ ವೆನ್ಲಾಕ್ ಆಸ್ಪತ್ರೆಗೆ ಭೇಟಿ : ವದಂತಿಗೆ ಕಿವಿಕೊಡದಿರಲು ಮನವಿ

ಮಂಗಳೂರು, ಮಾ 24, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊರೋನಾ ಚಿಕಿತ್ಸಾ ವಾರ್ಡ್ ಹಾಗೂ ಕೊರೋನಾ ಶಂಕಿತರ ತಪಾಸಣೆಗೆ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗಿರುವ ವ್ಯವಸ್ಥೆ ಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹಾಗೂ ವೆನ್ಲಾಕ್ ಆಸ್ಪತ್ರೆಯ ಮುಖ್ಯಸ್ಥೆ ಡಾ‌.ರಾಜೇಶ್ವರಿ ದೇವಿ ಅವರು ಉಪಸ್ಥಿತರಿದ್ದು, ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಗಾಗಿ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದರು. ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆ ವೆನಲಾಕ್ ಬಗ್ಗೆ ಅಪಪ್ರಚಾರ ನಡೆಸಿರುವ ಘಟನೆ ಸೋಮವಾರ ನಡೆದಿತ್ತು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧಿವೇಶನದ ನಿಮಿತ್ತ ದೆಹಲಿಯಲ್ಲಿ ಇದ್ದರು. ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಜನರು ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ ಎನ್ನುವ ಊಹಾಪೋಹದ ಬಗ್ಗೆ ಗೊಂದಲ ಉಂಟಾಗುತ್ತಿರುವುದನ್ನು ಅರಿತುಕೊಂಡ ಸಂಸದರು ತಕ್ಷಣ ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದರು.
ಮಂಗಳೂರಿಗೆ ತಲುಪಿದ ಕೂಡಲೇ ನೇರವಾಗಿ ವೆನಲಾಕ್ ಆಸ್ಪತ್ರೆಗೆ ತೆರಳಿದ ನಳಿನ್ ಕಟೀಲ್, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಅಧೀಕ್ಷಕಿ ಸಹಿತ ವಿವಿಧ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿದರು. ಸಂಸದರಿಗೆ ಸೂಕ್ತ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಕರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ಬ್ಲಾಕ್ ವ್ಯವಸ್ಥೆ ಮಾಡಿರುವುದನ್ನು ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದರು. ಒಬ್ಬ ವ್ಯಕ್ತಿಯಲ್ಲಿ ಮಾತ್ರ ಕರೋನಾ ಪಾಸಿಟಿವ್ ಪತ್ತೆಯಾಗಿದ್ದು ಮತ್ತು ಇನ್ನೊಬ್ಬ ಕೊರೊನಾ ಶಂಕಿತ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಸುಮಾರು 200 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇಡುವ ವ್ಯವಸ್ಥೆ ಇದೆ. ಆದ್ದರಿಂದ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಟೀಲ್, ಜನರು ಊಹಾಪೋಹಗಳನ್ನು ನಂಬದಂತೆ ಮನವಿ ಮಾಡಿದರು. ಜಿಲ್ಲಾಡಳಿತ, ರಾಜ್ಯ, ರಾಷ್ಟ್ರ ಸಂಪೂರ್ಣವಾಗಿ ಜನರ ಆರೋಗ್ಯ ಕಾಳಜಿಗೆ ಕಟಿಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.