ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಶಾಸಕ ಸವದಿ ಭೂಮಿ ಪೂಜೆ

ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಶಾಸಕ ಸವದಿ ಭೂಮಿ ಪೂಜೆ   MLA Savadi performs Bhoomi Puja for the revival of the multi-village drinking water project

ಅಥಣಿ 20: ಜನೇವರಿ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಅಥಣಿಗೆ ಆಗಮಿಸಿ ಅಮ್ಮಾಜೇಶ್ವರಿ ಏತ ನೀರಾವರಿ ನೀರಾವರಿ ಮತ್ತು ಈಗಾಗಲೇ ಪೂರ್ಣಗೊಂಡ ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿ,  ಕೃಷಿ ಮಹಾವಿದ್ಯಾಲಯಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಐಗಳಿ ಕ್ರಾಸನಲ್ಲಿರುವ ಜಲ ಶುದ್ಧೀಕರಣ ಘಟಕದಲ್ಲಿ ಕಕಮರಿ ಮತ್ತು ಇತರ 13 ಗ್ರಾಮಗಳ ಕುಡಿಯುವ ನೀರು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.   

ಇತ್ತೀಚಿಗಷ್ಟೇ ಕೆರೆ ತುಂಬುವ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಈ ಯೋಜನೆಯ ಜೊತೆಗೆ ಪ್ರಗತಿ ಹಂತದಲ್ಲಿರುವ ಕಕಮರಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕೂಡ ಜನೇವರಿ ಒಳಗಾಗಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಲಿದೆ ಎಂದ ಅವರು ಈಗಾಗಲೇ ಬಜೆಟ್ ನಲ್ಲಿ ಅನುಮೋದನೆ ದೊರೆತ ಸುಮಾರು 500 ಕೋಟಿಯಷ್ಟು ವೆಚ್ಚದ ಕೃಷಿ ಮಹಾವಿದ್ಯಾಲಯಕ್ಕೂ ಶಂಕುಸ್ಥಾಪನೆ ನೆರವೇರಲಿದೆ ಎಂದರು.  

ರಾಜ್ಯದಲ್ಲಿ ಧರ್ಮಸಿಂಗ ಮುಖ್ಯಮಂತ್ರಿಯಾಗಿದ್ದಾಗ ಕಕಮರಿ ಮತ್ತು ಇತರ 13 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಮಂಜೂರಾತಿ ದೊರಕಿತ್ತು ನಂತರ ನಡೆದ ರಾಜಕೀಯ ಬದಲಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಮತ್ತು ಯಡಿಯುರ​‍್ಪನವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿತು ಎಂದ ಅವರು ಅಂದಿನಿಂದ ಇಲ್ಲಿಯವರೆಗೂ ನಿರಾತಂಕವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಈ ಯೋಜನೆಯ ಪುನಶ್ಚೇತನಕ್ಕಾಗಿ 25 ಕೋಟಿ ಅನುದಾನ ಮಂಜೂರಾಗಿದೆ ಎಂದರು.  

25 ಕೋಟಿಯಲ್ಲಿ 175 ಸಾಮಾರ್ಥ್ಯದ ಮೋಟಾರಗಳ ಬದಲಿಗೆ 225 ಕ್ಕೆ ಹೆಚ್ಚಿಸಲಾಗುವುದು ಜೊತೆಗೆ ಪೈಪಗಳ ಬದಲಾವಣೆ ಸೇರಿದಂತೆ ಯೋಜನೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಒಬ್ಬರಿಗೆ ಪ್ರತಿ ದಿನ 55 ಲೀಟರ್ ನೀರು ಕೊಡಬೇಕು ಎನ್ನುವ ಇತ್ತೀಚಿನ ನಿಯಮದಂತೆ ಎಲ್ಲ 14 ಗ್ರಾಮಗಳ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದ ಅವರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 160 ಬಹು ಗ್ರಾಮ ಕುಡಿಯುವ ನೀರು ಯೋಜನೆಗಳಲ್ಲಿ ಇದೇ ಮೊದಲ ಬಾರಿಗೆ ಕಕಮರಿ, ಮದಭಾವಿ ಮತ್ತು ಪಾರ್ಥನಹಳ್ಳಿ ಯೋಜನೆಗಳಿಗೆ ಮಾತ್ರ ಪುನಶ್ಚೇತನಕ್ಕೆ ಅನುದಾನ ಮಂಜೂರಾಗಿದೆ ಎಂದರು.  

 ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವೀಂದ್ರ ಮೂರ್ಗಾಲಿ ಪ್ರಸ್ತಾವಿಕವಾಗಿ ಮಾತನಾಡಿದರು.      

ಕಾರ್ಯಕ್ರಮದಲ್ಲಿ ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಸಣ್ಣ ನೀರಾವರಿ ಇಲಾಖೆಯ ಪ್ರವೀಣ ಪಾಟೀಲ, ಕಿರಿಯ ಅಭಿಯಂತರ ಬಸವರಾಜ ಪಾಟೀಲ,ಕಿರಣ ಮಾಳಿ, ಮಂಜುನಾಥ ನಾಗೂರ, ಕಾಮಗಾರಿ ಗುತ್ತಿಗೆ ಪಡೆದುಕೊಂಡ ಬೆಂಗಳೂರಿನ ಮಾಲು ಕನ್ಸಸ್ಟಕ್ಷನ್ ಸಂಸ್ಥೆಯ  ನವೀನ ನಾಗನೂರ, ಮಲ್ಲು ಮೇಲಿನಮನಿ, ಧುರೀಣರಾದ ಶೇಖರ ನೇಮಗೌಡ, ಶ್ಯಾಮರಾವ ಪೂಜಾರಿ, ಸುಶೀಲಕುಮಾರ ಪತ್ತಾರ ಸೇರಿದಂತೆ ಯೋಜನೆ ವ್ಯಾಪ್ತಿಯ ಗ್ರಾಮ ಪಂಚಾಯತ ಅಧ್ಯಕ್ಷರು, ಧುರೀಣರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.