ಶಾಸಕ ಸೈಲ್‌ಗೆ 3 ಎಕರೆ ಅಲ್ಲ ; 30 ಗುಂಟೆ ಅಷ್ಟೇ ಇದೆ: ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ

ಶಾಸಕ ಸೈಲ್‌ಗೆ 3 ಎಕರೆ ಅಲ್ಲ ; 30 ಗುಂಟೆ ಅಷ್ಟೇ ಇದೆ: ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ  MLA Sail does not have 3 acres; he only has 30 guntas: Congress spokesperson Shambhu Shetty

ಕಾರವಾರ 14 : ನಗರದ ಹಳೆಯ ಗೀತಾಂಜಲಿ ಟಾಕೀಸ್ ಹತ್ತಿರ ಶಾಸಕ ಸತೀಶ್ ಸೈಲ್ ಮೂರು ಎಕರೆ ಭೂಮಿ ಹೊಂದಿಲ್ಲ. ಆ ಭಾಗದಲ್ಲಿ ಅವರು ಕೇವಲ 30 ಗುಂಟೆ ಹಾಗೂ ಪ್ರತ್ಯೇಕ 2 ಗುಂಟೆ ಭೂಮಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಕೆ. ಶಂಭು ಶೆಟ್ಟಿ ಹೇಳಿದರು  ಕಾರವಾರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೊಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಳೆಯ ಗೀತಾಂಜಲಿ ಟಾಕೀಸ್ ಪಕ್ಕ ಸೈಲ್ 3 ಎಕರೆ ಜಮೀನು ಹೊಂದಿದ್ದು, ಈ ಜಮೀನಿಗೆ ತೆರಳಲು ದಾರಿ ಮಾಡಿಕೊಳ್ಳುವ ಉದ್ದೇಶದಿಂದ ಹಳೆಯ ಬಸ್ ತಂಗುದಾಣವನ್ನು ನಗರದ ಹಿಂದು ಹೈಸ್ಕೂಲ್ ಬಳಿ ಸ್ಥಳಾಂತರಿಸಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾಡಿದ್ದ ಅಪಾದನೆಯನ್ನು ತಳ್ಳಿಹಾಕಿದರು. ಮೈಸೂರು ಮಹಾರಾಜನ ವಂಶಸ್ಥರು ಮೈಸೂರಿನಾದ್ಯಂತ ಹಲವೆಡೆ ಆಸ್ತಿಯನ್ನು ಹೊಂದಿದ್ದಾರೆ.  

ಅವರ ಸಂಬಂಧಿಕ ಸಂಸದರಾಗಿದ್ದು, ಮೈಸೂರು ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರೂ, ಅಲ್ಲೇ ಹತ್ತೀರದಲ್ಲೇ ಅವರ ಆಸ್ತಿ ಇರಬಹುದು. ಹಾಗಂತ ಅವರು ತಮ್ಮ ಆಸ್ತಿಗೆ ಅನುಕೂಲತೆ ಮಾಡಿಕೊಳ್ಳಲು ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ ಎಂದು ದೂರಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಶಂಭು ಶೆಟ್ಟಿ, ಶಾಸಕ ಸತೀಶ ಸೈಲ್ 700-800 ಕೋಟಿ ವ್ಯವಹಾರ ಹೊಂದಿರುವ ಒಬ್ಬ ಉದ್ಯಮಿ. ಅವರು ತಮ್ಮ ದುಡಿಮೆ, ಹಣದಿಂದ ಹಲವೆಡೆ ಆಸ್ತಿ ಖರೀದಿಸಿರಬಹುದು. ಆದರೆ ಅವರ ಆಸ್ತಿಗೆ ಅನುಕೂಲ ಮಾಡುವ ಉದ್ದೇಶದಿಂದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಹೇಳುವುದು ಸರಿಯಲ್ಲ. ಬಸ್ ಸ್ಟಾಪ್ ಸ್ಥಳಾಂತರವನ್ನು ಶಾಸಕ ಸೈಲ್ ಅವರ ಆಸ್ತಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಶಂಭು ಶೆಟ್ಟಿ ಹೇಳಿದರು.  

ಫುಟಪಾತಲ್ಲೇ ಬಸ್ ತಂಗುದಾಣ : ಫುಟ್ ಪಾತ್ಲ್ಲೆ ಬಸ್ ತಂಗುದಾಣ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಗೆ ತಿರುಗೇಟು ನೀಡಿದ ಶಂಭು ಶೆಟ್ಟಿ, ನಗರದ ಡಿಸಿ ಕಚೇರಿ ಎದುರು, ಬಿಣಗಾ, ಅವರ್ಸಾ ಸೇರಿದಂತೆ ಹಲವೆಡೆ ಫುಟ್ ಪಾತ್ ಮೇಲೆಯೇ ಬಸ್ ಸ್ಟಾಪ್ ನಿರ್ಮಿಸಲಾಗಿದೆ. ಇನ್ನು ನಗರದ ಹಿಂದು ಹೈಸ್ಕೂಲ್ ಬಳಿ ಹಲವು ವರ್ಷಗಳ ಹಿಂದೆ ಬಸ್ ಸ್ಟಾಪ್ ಇದ್ದುದನ್ನು ನೆನಪಿಸಿದರು.  

ನಗರಕ್ಕೆ ಮತ್ತಷ್ಟು ಬಸ್ ಸ್ಟಾಪ್‌: ವಿದ್ಯಾರ್ಥಿಗಳು, ಗ್ರಾಮೀಣ ಜನರು ಸೇರಿದಂತೆ ಎಲ್ಲಾ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಿತ್ರ ಸಮಾಜ, ಶ್ರೀಜಿಟ್ರೋನಿಕ್ಸ್‌ ಹಾಗೂ ಈಗ ನಿರ್ಮಿಸಲಾಗುತ್ತಿರುವ ಬಸ್ ಸ್ಟಾಪ್ ಎದುರು ಸೇರಿದಂತೆ ಹಲವು ಬಸ್ ಸ್ಟಾಪ್ ನಿರ್ಮಾಣ ಮಾಡುವ ಚಿಂತನೆ ಶಾಸಕರದ್ದು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಶಂಭು ಶೆಟ್ಟಿ ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲಗುಟಕರ್ , ನೂತನ ಜೈನ್ ಸೇರಿದಂತೆ ಹಲವರು ಇದ್ದರು.