ಮುದ್ದೇಬಿಹಾಳದಲ್ಲಿ ಮಕ್ಕಳಿಗೆ ಆನೆಕಾಲು ರೋಗ ಪತ್ತೆ: ಆರೋಗ್ಯ ಇಲಾಖೆ ಕಟ್ಟೆಚ್ಚರ

ಮುದ್ದೇಬಿಹಾಳದಲ್ಲಿ ಮಕ್ಕಳಿಗೆ ಆನೆಕಾಲು ರೋಗ ಪತ್ತೆ: ಆರೋಗ್ಯ ಇಲಾಖೆ ಕಟ್ಟೆಚ್ಚರ Lymphatic filariasis detected in children in Muddebihal; Health Department on high alert

ಮುದ್ದೇಬಿಹಾಳ 02 : ಪಟ್ಟಣದ 7 ವರ್ಷದೊಳಗಿನ ಮಕ್ಕಳಲ್ಲಿ ಆನೆಕಾಲು ರೋಗದ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಆರೋಗ್ಯ ನೀರಿಕ್ಷಣಾ ಅಧಿಕಾರಿ ವಾಲಿಕಾರ ಮನವಿ ಮಾಡಿದರು.ಪಟ್ಟಣದ ಪ್ರಾರ್ಥನಾ ವಿದ್ಯಾ ಮಂದಿರದ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಿದ ಬಳಿಕ ಮಾತನಾಡಿದ ಅವರು, ಆನೆಕಾಲು ರೋಗವು ಮುಖ್ಯವಾಗಿ ರಾತ್ರಿ ವೇಳೆ ಕಡಿಯುವ ಸೊಳ್ಳೆಗಳಿಂದ ಹರಡುತ್ತದೆ. ಹೀಗಾಗಿ ಮಕ್ಕಳು ಸೊಳ್ಳೆಗಳ ಕಾಟಕ್ಕೆ ಒಳಗಾಗದಂತೆ ಪಾಲಕರು ಮುನ್ನೆಚ್ಚರಿಕೆ ವಹಿಸಬೇಕು.

ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಪ್ರತಿಯೊಂದು ಕುಟುಂಬದ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಸದ್ಯ ಪಟ್ಟಣದ ಹೋರಪೇಠ ಮತ್ತು ಅವಟಿಗಲ್ಲಿ ಪ್ರದೇಶಗಳಲ್ಲಿನ 7 ವರ್ಷದೊಳಗಿನ ಮಕ್ಕಳಿಗೆ ತಪಾಸಣೆ ನಡೆಸುವಂತೆ ಮೇಲಧಿಕಾರಿಗಳು ಸೂಚಿಸಿದ್ದಾರೆ.. ಶಾಲೆಯಲ್ಲಿ ಲಭ್ಯವಿಲ್ಲದ ಮಕ್ಕಳನ್ನು ಗುರುತಿಸಿ, ಬಳಿಕ ಆರೋಗ್ಯ ಸಿಬ್ಬಂದಿ ಅವರ ಮನೆಗಳಿಗೆ ತೆರಳಿ ತಪಾಸಣೆ ನಡೆಸಲಿದ್ದಾರೆ ಎಂದು ವಾಲಿಕಾರ ತಿಳಿಸಿದರು.ಆನೆಕಾಲು ರೋಗದ ಬಗ್ಗೆ ಪಾಲಕರು ನಿರ್ಲಕ್ಷ್ಯ ವಹಿಸದೆ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಿ ತಮ್ಮ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ವಿಜಯಮಹಾಂತೇಶ ಹೂಗಾರ, ಸಿಬ್ಬಂದಿ ತಾಸ್ಕಿ ನದಾಫ, ಆಶಾ ಕಾರ್ಯಕರ್ತೆ ಇದ್ದರು.