ಲೋಕಾಯುಕ್ತರ ದಾಳಿ: ಲಂಚದ ಹಣದೊಂದಿಗೆ ಇಬ್ಬರು ಆರೋಪಿಗಳ ಬಂಧನ

ಲೋಕಾಯುಕ್ತರ ದಾಳಿ: ಲಂಚದ ಹಣದೊಂದಿಗೆ ಇಬ್ಬರು ಆರೋಪಿಗಳ ಬಂಧನ Lokayukta raid: Two accused arrested with bribe money

ರಾಯಬಾಗ 28: ತಹಸೀಲ್ದಾರ್ ಕಚೇರಿಯಲ್ಲಿ ಜಮೀನು ಪಹಣಿ ದಾಖಲೆಯಲ್ಲಿದ್ದ 15 ವರ್ಷಗಳ ಕಾಲ ಜಮೀನು ಹಸ್ತಾಂತರ ಮಾಡಬಾರದು ಎಂಬ ಷರತ್ತನ್ನು ತೆಗೆದುಹಾಕಲು ರೂ. 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಅದನ್ನ ಮಧ್ಯವರ್ತಿ ಮೂಲಕ ಪಡೆಯುತ್ತಿದ್ದ ದ್ವಿತೀಯ ದರ್ಜೆಯ ಸಹಾಯಕ ಸಿ.ಟಿ.ಮೊರಟಗಿ ಮೇಲೆ ಲೋಕಾಯುಕ್ತರ ದಾಳಿ ಮಾಡಿರುವ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ.  

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ರೈತ ಶಿವಾನಂದ ದುಂಡಗಿ ರವರ ಅಜ್ಜನಿಗೆ ಸನ್ 1974 ರಲ್ಲಿ ಭೂ ನ್ಯಾಯಮಂಡಳಿ ಆದೇಶ ದಂತೆ ಮಂಜೂರಾದ ಜಮೀನನ್ನು ಕನಿಷ್ಠ 15 ವರ್ಷಗಳ ವರೆಗೆ ಪರಬಾರೆ ಮಾಡಬಾರದು ಅಂತಾ ಪಹಣಿ ಯಲ್ಲಿದ್ದ ನಿರ್ಬಂಧವನ್ನು ತೆಗೆದು ಆದೇಶ ಮಾಡಿ ಕೊಡುವಂತೆ ರಾಯಬಾಗ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯ ಹಿನ್ನಲೆಯಲ್ಲಿ ಸಂಬಂಧಪಟ್ಟ ಅರ್ಜಿಯ ಮೇಲೆ ಕ್ರಮ ಜರುಗಿಸಿ ತಹಸೀಲ್ದಾರ್ ರಾಯಬಾಗ ರವರಿಂದ್ ಆದೇಶ ಮಾಡಿಸಿ ಕೊಡಲು ಕೇಸವರ್ಕರ್ (ದ್ವಿತೀಯ ದರ್ಜೆ ಸಹಾಯಕ )ಆದ ಚಂದ್ರಮಪ್ಪ ಮೋರಟಗಿ  ರವರು ರೂ. 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.   

ಈ ಬಗ್ಗೆ ಫಿರ್ಯಾದಿಯು ಜ.27 ರಂದು ಕರ್ನಾಟಕ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್‌.ಪಿ ಮಲ್ಲೇಶ್ ಟಿ. ರವರು ಭ್ರಷ್ಟಾಚಾರ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು, ತನಿಖೆ ಕೈಕೊಳ್ಳಲು ಇನ್ಸ್ಪೆಕ್ಟರ್ ನಿರಂಜನ ಪಾಟೀಲ ರವರಿಗೆ ಆದೇಶಿಸಿದ್ದರು. ಇನ್ಸ್ಪೆಕ್ಟರ ನಿರಂಜನ ಪಾಟೀಲ್ ಹಾಗೂ ಸಿಬ್ಬಂದಿ ಮಂಗಳವಾರ ಸಾಯಂಕಾಲ 5 ಗಂಟೆ ಸುಮಾರಿಗೆ ಆರೋಪಿತನಾದ ಚಂದ್ರಮಪ್ಪ ಮೋರಟಗಿ (ದ್ವಿತೀಯ ದರ್ಜೆ ಸಹಾಯಕ ) ರವರು ಫಿರ್ಯಾದಿಯಿಂದ ರೂ. 80 ಸಾವಿರ ಲಂಚದ ಹಣವನ್ನು ಮಧ್ಯವರ್ತಿಯಾದ ಆರೋಪಿ ನಾಗೇಂದ್ರ ಕೃಷ್ಣಾ ಮಾರಾಸರ್ಕರ್ ಈತನ ಮೂಲಕ ಸ್ವೀಕರಿಸಿದ ಕಾಲಕ್ಕೆ ದಾಳಿ ಮಾಡಿ ಇಬ್ಬರು ಆರೋಪಿತರನ್ನು ಲಂಚದ ಹಣದೊಂದಿಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.  ದಾಳಿಯಲ್ಲಿ ಇನ್ಸ್ಪೆಕ್ಟರಗಳಾದ ಬಾಲಚಂದ್ರ ಲಕ್ಕಮ್ಮ, ಇನ್ಸ್ಪೆಕ್ಟರ ಗೋವಿಂದಗೌಡ ಹಾಗೂ ಸಿಬ್ಬಂದಿ ರವಿ, ರಾಜು, ಸಂತೋಷ, ಗೀರೀಶ್, ಅಭಿಜಿತ್, ಬಸವರಾಜ ಭಾಗವಹಿಸಿದ್ದರು.