ಬೆಂಗಳೂರು, ಏ 28, ಮೇ 3 ರ ನಂತರ ಜಿಲ್ಲಾ ಮಟ್ಟದ ಬದಲು ತಾಲ್ಲೂಕು ಮಟ್ಟದಲ್ಲಿ, ವಾರ್ಡ್ ಹಂತದಲ್ಲಿ ಲಾಕ್ ಡೌನ್ ಸಡಲಿಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಕೊರೋನಾ ವೈರಸ್ ಸೋಂಕಿನಿಂದಾಗಿ ಲಾಕ್ ಡೌನ್ ಆಗಿರುವ ಜಯನಗರ ವಿಧಾನಸಭಾ ಕ್ಷೇತ್ರದ ಸಾರಕ್ಕಿ ಮತ್ತು ಜೆ.ಪಿ. ನಗರ ವಾರ್ಡ್ ಗಳಲ್ಲಿ ತೀರಾ ಸಂಕಷ್ಟದಲ್ಲಿರುವ ಕುಟುಂಬಳಿಗೆ ಮಾಜಿ ಮಹಾಪೌರ ಎಸ್.ಕೆ. ನಟರಾಜ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಜೇಜಸ್ವಿ ಸೂರ್ಯ ಅವರೊಂದಿಗೆ ತಳ್ಳುಗಾಡಿಗಳ ಮೂಲಕ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಲಾಕ್ ಡೌನ್ ಮಾಡಿದರೆ ಇಡೀ ಜಿಲ್ಲೆಯಲ್ಲಿ ಚಟುವಟಿಕೆ ಸ್ಥಗಿತಗೊಳ್ಳಲಿದೆ. ಬದಲಿಗೆ ತಾಲ್ಲೂಕು ಮಟ್ಟದಲ್ಲಿ ಲಾಕ್ ಡೌನ್ ಮಾಡುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಬೆಂಗಳೂರು ನಗರದಲ್ಲಿ 198 ವಾರ್ಡ್ ಗಳಿದ್ದು, ಕೆಲವು ವಾರ್ಡ್ ಗಳಲ್ಲಿ ಕೊರೋನಾ ಸಮಸ್ಯೆ ಕಂಡು ಬಂದಿದೆ. ಹಾಗೆಂದು ಇಡೀ ಜಿಲ್ಲೆಯನ್ನು ಲಾಕ್ ಡೌನ್ ಮಾಡಿದರೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು ತೀವ್ರ ಸಮಸ್ಯೆ ಎದುರಾಗಲಿದೆ. ಹೀಗಾಗಿ ನಗರ ಪ್ರದೇಶಗಳಲ್ಲಿ ವಾರ್ಡ್ ಗಳ ಮಟ್ಟದಲ್ಲಿ ಮಾತ್ರ ಲಾಕ್ ಡೌನ್ ಮಾಡಲು ಉದ್ದೇಶಿಸಲಾಗಿದೆ ಎಂದರು.
ಮೇ 3ರ ಲಾಕ್ ಡೌನ್ ಸಡಿಲಿಸಲಾಗುತ್ತಿದ್ದು, ಕೂಲಿ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ದೊರೆಯಲಿದೆ. ಎಲ್ಲರ ಸಹಕಾರದಿಂದ ಕೊರೋನ ವೈರಸ್ ಮುಕ್ತ ಭಾರತ ನಿರ್ಮಾಣ ಮಾಡಬಹುದು. ಕೊರೋನ ವೈರಸ್ ಇಡಿ ವಿಶ್ವಕ್ಕೆ ಮಹಾಮಾರಿಯಾಗಿ ವಕ್ಕರಿಸಿದೆ .ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಿಟ್ಟ ನಿರ್ಧಾರದಿಂದ ರಾಜ್ಯ ಮತ್ತು ದೇಶದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಅಶೋಕ್ ಹೇಳಿದರು.
ಎಸ್.ಕೆ. ನಟರಾಜ್ ಮಾತನಾಡಿ, ಕೊರೋನ ವೈರಸ್ ನಿಂದ ಸಂಕಷ್ಟದಲ್ಲಿದ್ದು, ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಬಡವರು, ಮಹಿಳೆಯರು, ವಯೊವೃದ್ದರು, ಆಟೋ ಚಾಲಕರನ್ನು ಗುರುತಿಸಿ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣದಿಂದ 5000 ಸಾವಿರ ಕುಟುಂಬಗಳಿಗೆ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣಿ ಗೋಧಿ ಇನ್ನಿತರೆ ಆಹಾರ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ. ಇನ್ನೂ ಮೂರು ಸಾವಿರ ಕಿಟ್ ಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು. ಜೆ.ಪಿ. ನಗರ ಬಿ.ಬಿ.ಎಂ.ಪಿ.ಸದಸ್ಯರಾದ ಲಕ್ಷ್ಮೀನಟರಾಜ್ ,ಸಾರಕ್ಕಿ ವಾರ್ಡ್ ನ ದೀಪಿಕಾ ಎಲ್.ಮಂಜುನಾಥರೆಡ್ಡಿ ,ಬಿ.ಜೆ.ಪಿ.ಮುಖಂಡರಾದ ಚಿರಂಜೀವಿ ವಿನ್ಯಾಸ್ , ಯಶವಂತ, ಮಂಜುನಾಥರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.