ಲಾಕ್ ಡೌನ್ ಸಡಲಿಕೆ- ಭಾನುವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ಮುಖಂಡರ ಸಭೆ

ಬೆಂಗಳೂರು, ಏ 18, ಲಾಕ್ ಡೌನ್ ಸಡಲಿಕೆ, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಕೆಲಸ, ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಸರ್ವ ಪಕ್ಷ ಮುಖಂಡರ ಸಭೆ ಕರೆದಿದ್ದಾರೆ. ಏಪ್ರಿಲ್ 20 ರ ನಂತರ ಲಾಕ್ ಡೌನ್ ಸಡಲಿಕೆ ಮಾಡುವ ಕುರಿತಂತೆ ವ್ಯಾಪಕ ಬೇಡಿಕೆಗಳಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ಮುಖಂಡರ ಸಲಹೆ ಸೂಚನೆ ಆಧಾರದ ಮೇಲೆ ಯಡಿಯೂರಪ್ಪ ಮುಂದಿನ ಹೆಜ್ಜೆ ಇಡಲಿದ್ದಾರೆ. ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ  ಬಿ. ಶ್ರೀರಾಮುಲು, ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿ ಕುರಿತು ಯಡಿಯೂರಪ್ಪ ಅವರು ಸರ್ವಪಕ್ಷ ಮುಖಂಡರ ಸಭೆ ಕರೆದಿದ್ದಾರೆ ಎಂದು ಹೇಳಿದ್ದಾರೆ. ಬಳ್ಳಾರಿಯಲ್ಲಿಂದು ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದು, ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಲಿದ್ದಾರೆ. ಬಳಿಕ ಮುಖ್ಯಮಂತ್ರಿಯವರು ಸಂಪುಟ ಸದಸ್ಯರ ಜೊತೆ ಚರ್ಚಿಸಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಿದ್ದಾರೆ ಎಂದರು.ಸೀಲ್‌ಡೌನ್ ಆದ ಪ್ರದೇಶಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿ ಉಳಿದ ಕಡೆ ಕಠಿಣ ಕ್ರಮಗಳಿಂದ ಕೆಲವು ವಿನಾಯಿತಿಗಳನ್ನು ನೀಡುವುದು ಸೂಕ್ತ, ಆರೆಂಜ್ ಝೋನ್ ನಲ್ಲಿ ಲಾಕ್ ಡೌನ್ ಸಡಲಿಕೆ  ಮಾಡುವಂತೆ ಮುಖ್ಯಮಂತ್ರಿಯವರಿಗೆ ತಾವೂ ಸಹ ಸಲಹೆ ನೀಡಿರುವುದಾಗಿ ಸಚಿವ ಶ್ರೀರಾಮುಲು ತಿಳಿಸಿದರು. ಲಾಕ್‌ಡೌನ್‌ನಿಂದ ಜನತೆ ಒಂದೇ ಕಡೆ ಇರುವ ಕಾರಣ ಕಠಿಣ ನಿಯಮಗಳಲ್ಲಿ ಸಡಿಲಿಕೆ ಮಾಡುವಂತೆ ಬೇಡಿಕೆ ಇದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಜನತೆ ವೈಯಕ್ತಿಕ ಶುಚಿತ್ವ ಕಾಪಾಡಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವ ಶ್ರೀರಾಮುಲು ಸಲಹೆ ಮಾಡಿದರು.