ಬೊಲಿವಿಯಾದಲ್ಲಿ ಏ 30 ರವರೆಗೆ ಲಾಕ್ ಡೌನ್ ವಿಸ್ತರಣೆ

ಮೆಕ್ಸಿಕೋ, ಏ 15, ಬೊಲಿವಿಯಾ ಪ್ರಾಧಿಕಾರ ಕೊರೊನಾ ಸೋಂಕು ಇನ್ನಷ್ಟು ಹರಡದಂತೆ ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಅನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಿದೆ.ರಾಷ್ಟ್ರವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಮಧ್ಯಂತರ ಅಧ್ಯಕ್ಷ ಜಿಯಾನೈನ್ ಅನೆಜ್ ಈ ಘೋಷಣೆ ಮಾಡಿದ್ದಾರೆ. ವೈಜ್ಞಾನಿಕ ಮಂಡಳಿಯ ಶಿಫಾರಸ್ಸುಗಳ ಪ್ರಕಾರ ಪ್ರತ್ಯೇಕವಾಗಿರಿಸುವ ಕ್ರಮಗಳನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ ಈ ನಿಯಮಗಳನ್ನು 7 ದಿನಗಳಲ್ಲಿ ಸಡಿಲಿಸಬಹುದೇ ಎಂಬ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 30 ರವರೆಗೆ ಕರ್ಫ್ಯೂ ಮತ್ತು ಅನಗತ್ಯ ಓಡಾಟಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಒಳಾಡಳಿತ ಸಚಿವ ಅರ್ಟುರೋ ಮುರಿಲೋ ಟ್ವೀಟ್ ಮಾಡಿದ್ದಾರೆ. ಕೊರೊನಾ ಸೋಂಕು ವ್ಯಾಪಿಸುತ್ತಿದ್ದ ಕಾರಣ ಮಾರ್ಚ್ 26 ರಂದು ಈ ದಕ್ಷಿಣ ಅಮೆರಿಕ ರಾಷ್ಟ್ರ ತುರ್ತು ಪರಿಸ್ಥಿತಿ ಘೋಷಿಸಿತ್ತು. ಮೇ 3 ರಂದು ನಿಗದಿಯಾಗಿದ್ದ ಅಧ್ಯಕ್ಷೀಯ ಚುನಾವಣೆ ನಾಲ್ಕು ತಿಂಗಳವರೆಗೆ ಮುಂದೂಡಲ್ಪಡಬಹುದು ಎಂದು ಅಲ್ಲಿನ ಚುನಾವಣಾ ಪ್ರಾಧಿಕಾರ ಅಂದೇ ತಿಳಿಸಿತ್ತು.