ಬೆಂಗಳೂರು, ಏ.14, ಎಲ್ಲೆಡೆ ಮಹಾಮಾರಿಯಾಗಿ ಹರಡುತ್ತಿರುವ ಕೊರೋನಾ ಸೊಂಕು (ಕೋವಿಡ್ - 19) ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಲಾಕ್ ಡೌನ್ ಅವಧಿಯನ್ನು ಮೇ ತಿಂಗಳ ಮೂರನೇ ದಿನಾಂಕದವರೆಗೆ ವಿಸ್ತರಿಸಿರುವುದನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ವಾಗತಿಸಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಶ್ವವ್ಯಾಪಿಯಾಗಿರುವ ಕೊರೋನಾ ವೈರಸ್ ನ್ನು ನಿರ್ಮೂಲನೆ ಮಾಡುವುದೇ ನಮ್ಮ ಆದ್ಯ ಧ್ಯೇಯವಾಗಬೇಕು. ಪ್ರಪಂಚದ ಬಹುದೊಡ್ಡ ದೇಶಗಳೇ ಇಂದು ಈ ಕೋವಿಡ್ 19 ಸೋಂಕಿನಿಂದ ತತ್ತರಿಸಿರುವಾಗ ನಾವು ಲಾಕ್ ಡೌನ್ ನಿಯಮಗಳನ್ನು ಪಾಲಿಸಿ ಸೋಂಕು ಮುಕ್ತ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದ್ದಾರೆ.ಹಾಗಾಗಿ ನಾವು ಎಲ್ಲರೂ ಸಾಮಾಜಿಕ ಅಂತರ ಕಾಯ್ದು ಕೊಂಡು, ಮನೆಯಲ್ಲಿಯೇ ಇದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳೋಣ. ಬಡವರಿಗೆ, ಅಶಕ್ತರಿಗೆ ಸಹಾಯ ಮಾಡೋಣ. ಆರೋಗ್ಯ ಸೇತು ಮೊಬೈಲ್ ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಅರಿವು ಮೂಡಿಸೋಣ ಎಂದು ಅವರು ಮನವಿ ಮಾಡಿದ್ದಾರೆ.ಸೊಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಗಳನ್ನು ಮುಕ್ತಕಂಠದಿಂದ ಗೌರವಿಸಬೇಕು. ದಿನನಿತ್ಯದ ಜೀವನಕ್ಕೆ ಅವಶ್ಯಕವಾದ ವಸ್ತುಗಳು ಸಿಗುವಂತೆ ನಮ್ಮ ಸರ್ಕಾರವು ಕ್ರಮವಹಿಸಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯೊಳಗೆ ಇದ್ದು ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಬೇಕು ಎಂದು ಅವರು ಮನವಿ ಮಾಡಿದರು.