ಮಾನವೀಯ ಮೌಲ್ಯ ಬೆಳೆಸಿಕೊಂಡು ಬದುಕಿ: ಸಿದ್ದಲಿಂಗ ದೇವರು

ಮಾನವೀಯ ಮೌಲ್ಯ ಬೆಳೆಸಿಕೊಂಡು ಬದುಕಿ: ಸಿದ್ದಲಿಂಗ ದೇವರು  Live by cultivating human values: Siddalinga Devaru


ತಾಳಿಕೋಟಿ  27: ಭೂಮಿಯ ಮೇಲೆ ಬದುಕಿರುವಷ್ಟು ದಿನ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಮಾನವೀಯತೆಯಿಂದ ಬದುಕಬೇಕು ಎಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಸಿದ್ದಲಿಂಗ ದೇವರು ಹೇಳಿದರು.  

ಬುಧವಾರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಆಶ್ರಯ ಕಾಲೋನಿ ಯಂಗ್ ಕಮಿಟಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.  

ಎಲ್ಲರಿಗೂ ಬದುಕುವ ಹಕ್ಕು ಸಮಾನವಾಗಿದ್ದು, ಯಾರಿಗೂ ನೋವಾಗದಂತೆ ಬದುಕಬೇಕು. ಪ್ರವಾದಿಗಳು, ಮಹಾತ್ಮರು, ದಾರ್ಶನಿಕರು, ಸಂತರು ಹಾಗೂ ಶರಣರು ತೋರಿಸಿಕೊಟ್ಟ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.  

ಕರವೇ ಜಿಲ್ಲಾ ಉಪಾಧ್ಯಕ್ಷ ಜೈ ಭೀಮ ಮುತ್ತಗಿ ಮಾತನಾಡಿ, ಪ್ರವಾದಿ ಮೊಹಮ್ಮದರು ದುರ್ಬಲರು, ನಿರ್ಗತಿಕರು ಹಾಗೂ ತುಳಿತಕ್ಕೊಳಗಾದವರ ಏಳಿಗೆಗಾಗಿ ಶ್ರಮಿಸಿದರು. ದ್ವೇಷ, ಅಸೂಯೆ ಮತ್ತು ಹಗೆತನವನ್ನು ವಿರೋಧಿಸಿ, ಸಮಾಜದಲ್ಲಿ ಮಹತ್ತರ ಬದಲಾವಣೆ ತಂದರು. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಸಿದ್ದಲಿಂಗ ದೇವರು ಸಿಹಿ ವಿತರಣೆಗೆ ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಬಿ. ಕಟ್ಟಿಮನಿ, ಪಿಎಸ್‌ಐ ಜ್ಯೋತಿ ಕೋತ್, ದಲಿತ ಮುಖಂಡ ಮುತ್ತಪ್ಪ ಚಮಲಾಪೂರ, ಮುಸ್ಲಿಂ ಸಮಾಜದ ಯುವ ಮುಖಂಡ ನಿರಂಜನಶಾ ಮಕಾನದಾರ, ಮಾರುತಿ ಸಂಘದ ಅಧ್ಯಕ್ಷ ತೋಟಪ್ಪ ಏವೂರ, ಆಶ್ರಯ ಕಾಲೋನಿ ಯಂಗ್ ಕಮಿಟಿ ಅಧ್ಯಕ್ಷ ರಾಜು ಚಿತ್ತರಗಿ, ಉಪಾಧ್ಯಕ್ಷ ಖಾಜಾಪಟೇಲ ಪಟೇಲ ಸೇರಿದಂತೆ ಹಲವು ಮುಖಂಡರು, ಕಮಿಟಿ ಪದಾಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.