18 ವರ್ಷಗಳ ಬಳಿಕ ಗದಗದಲ್ಲಿ ಬಂಡಾರದ ಜಾತ್ರೆ: ಭಕ್ತರ ಸಂಭ್ರಮ

18 ವರ್ಷಗಳ ಬಳಿಕ ಗದಗದಲ್ಲಿ ಬಂಡಾರದ ಜಾತ್ರೆ: ಭಕ್ತರ ಸಂಭ್ರಮ Bandara Jatra in Gadag after 18 years: Devotees rejoice


 ಗದಗ, 27: ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ ಅಂಗವಾಗಿ 18 ವರ್ಷಗಳ ಬಳಿಕ ಬುಧವಾರ ನಗರದಲ್ಲಿ ಬಂಡಾರದ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯರಿಗೆ ಭಕ್ತಿಯನ್ನು ಸಮರ​‍್ಿಸಿದರು.  

ಒಕ್ಕಲಗೇರಿಯ ದ್ಯಾಮವ್ವನ ಕಟ್ಟಿಯಿಂದ ಆರಂಭಗೊಂಡ ದೇವರ ಪಲ್ಲಕ್ಕಿಗಳ ಮೆರವಣಿಗೆ ಗಾಂಧಿ ಬಸವೇಶ್ವರ ವೃತ್ತ, ರಾಚೋಟೇಶ್ವರ ಗುಡಿ, ಹನುಮಂತಗಡಿ, ಮೆಹಬೂಬಸುಬಾನಿ ಕಟ್ಟೆ, ನಾಲ್ವಾಡ ಗಲ್ಲಿ ಹಾಗೂ ತಿಲಕ್ ಪಾರ್ಕ್‌ ರಸ್ತೆ ಮಾರ್ಗವಾಗಿ ಜೋಡ ಮಾರೂತಿ ದೇವಸ್ಥಾನದ ಎದುರಿನ ದುರ್ಗಾದೇವಿ ದೇವಸ್ಥಾನದವರೆಗೆ ಸಾಗಿತು.  

ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಬಂಡಾರದ ಹಳದಿ ಬಣ್ಣವೇ ಕಂಗೊಳಿಸಿತು. ವಿವಿಧ ವೃತ್ತಗಳಲ್ಲಿ ಬಂಡಾರ ತುಂಬಿದ ಚೀಲಗಳನ್ನು ಇರಿಸಲಾಗಿತ್ತು. ಭಕ್ತರು ಪರಸ್ಪರ ಬಂಡಾರ ಹಚ್ಚಿಕೊಂಡು ದೇವಿಯರಿಗೆ ಭಕ್ತಿಯನ್ನು ಸಮರ​‍್ಿಸಿ ಸಂಭ್ರಮಿಸಿದರು.  

ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು, ಯುವತಿಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಲವರು ಹಳದಿ ಬಣ್ಣದ ಉಡುಪು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಭಕ್ತರು ಪರಸ್ಪರ ಬಂಡಾರ ಹಚ್ಚಿಕೊಂಡು ಹರ್ಷ ವ್ಯಕ್ತಪಡಿಸಿದರು.  

18 ವರ್ಷಗಳ ಬಳಿಕ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಜನರಲ್ಲಿ ವಿಶೇಷ ಉತ್ಸಾಹ ಕಂಡುಬಂದಿತು. ಗ್ರಾಮ ದೇವತೆಗಳ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಜೋಡ ಮಾರೂತಿ ದೇವಸ್ಥಾನ, ರಾಚೋಟೇಶ್ವರ ದೇವಸ್ಥಾನ ಹಾಗೂ ಮೇನ್ ಬಜಾರ್ ಸುತ್ತಮುತ್ತ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಸ್ಥಳದಲ್ಲಿದ್ದ ಪೊಲೀಸರು ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಿ ವಾಹನ ಸಂಚಾರ ಸುಗಮಗೊಳಿಸಿದರು.  

ಐತಿಹಾಸಿಕ ಪರಂಪರೆಗೆ ಸಾಕ್ಷಿ  

ಕೋಟುಮಚಗಿ-ಬೆಟಗೇರಿ ಗ್ರಾಮ ದೇವತೆಗಳ ಹರಿಜಾತ್ರೋತ್ಸವದ ಪ್ರಮುಖ ಆಕರ್ಷಣೆಯೇ ಬಂಡಾರದ ಜಾತ್ರೆ. ಅವಳಿ ನಗರ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.  

ಜಾತ್ರಾ ಸಮಿತಿ ಸಹ ಕಾರ್ಯದರ್ಶಿ ಕೋಟ್ಲಾಂದಾರ ಹಾಗೂ ವಸಂತ ಪಡಗದ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಭಕ್ತರು ಜಾತ್ರೆಯ ಯಶಸ್ಸಿಗೆ ಸಹಕರಿಸಿದರು. ಎಲ್ಲ ಜಾತಿ-ಧರ್ಮಗಳ ಜನರು ಪಾಲ್ಗೊಂಡು ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಿದ್ದು, ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆ ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಯಿತು.