ಬಿಡುಗಡೆ ನಂತರ ಸ್ವಾವಲಂಬಿ ಜೀವನ ನಡೆಸಿ ಸತ್ಪ್ರಜೆಗಳಾಗಿ ಬಾಳಿರಿ: ಕೊಣ್ಣೂರ

ಬಿಡುಗಡೆ ನಂತರ ಸ್ವಾವಲಂಬಿ ಜೀವನ ನಡೆಸಿ ಸತ್ಪ್ರಜೆಗಳಾಗಿ ಬಾಳಿರಿ: ಕೊಣ್ಣೂರ  Live a self-reliant life after release and live as good citizens: Konnoor

ಬೆಳಗಾವಿ 08:  ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ದಿ. 07-07-2025 ರಂದು ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕರಾದ ವಿ ಕೃಷ್ಣಮೂರ್ತಿ ಇವರ ಮಾರ್ಗದರ್ಶನದಲ್ಲಿ ನಿವಾಸಿಗಳಿಗಾಗಿ “ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ” ತರಬೇತಿಯ ಸಮಾರೋಪ ಸಮಾರಂಭ ಜರುಗಿತು.  

ಸದರಿ ತರಬೇತಿಯು ಪಶುಪಾಲನೆ ಮತ್ತು ಪಶುವೈಧ್ಯಕೀಯ ಸೇವಾ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಳಗಾವಿ ತರಬೇತಿ ಕೇಂದ್ರದ ಮುಖ್ಯ ಪಶುವೈಧ್ಯಾಧಿಕಾರಿಗಳಾದ ಡಾಽಽ ಮಹಾದೇವ ತೇಲಿ ಹಾಗೂ ನಿವೃತ್ತ ಜಂಟಿ ನಿರ್ದೆಶಕರಾದ ಡಾಽಽ ಸಿ. ಬಿ. ಕೆಂಗಾರ, ಡಾಽಽ ಅಚಲಕರ ಆಗಮಿಸಿದ್ದರು ಅಧ್ಯಕ್ಷತೆಯನ್ನು ಕಾರಾಗೃಹದ ಸಹಾಯಕ ಅಧೀಕ್ಷಕರಾದ ಮಲ್ಲಿಕಾರ್ಜುನ ಕೊಣ್ಣೂರ ವಹಿಸಿದ್ದರು. 

ತರಬೇತಿ ಪಡೆದ ನಿವಾಸಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಲ್ಲಿಕಾರ್ಜುನ ಕೊಣ್ಣೂರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮಾಂಸದ ಬೇಡಿಕೆಯು ಹೆಚ್ಚಾಗುತ್ತಲಿದೆ ಕಾರಣ ಕುರಿ ಮತ್ತ ಮೇಕೆಯ ಸಾಕಾಣಿಕೆಯು ಅತ್ಯಂತ ಲಾಭದಾಯಕ ಕಸಬುವಾಗಿ ಬೆಳೆಯುತ್ತಲಿದೆ. ಕಾರಣ ಈ ತರಬೇತಿಯ ಸದುಪಯೋಗ ಪಡೆದು ಬಿಡುಗಡೆ ನಂತರ ಸಮಾಜದ ಮುಖ್ಯ ವಾಹಿನಿಗೆ ಮರಳಿ ಸ್ವಾವಲಂಬಿ ಜೀವನ ನಡೆಸಿ ಸತ್ಪ್ರಜೆಗಳಾಗಿ ಬಾಳಿರಿ ಎಂದು ಹೇಳಿದರು. ಜೈಲುವಾಸ ಶಿಕ್ಷೆ ಎಂದುಕೊಳ್ಳದೆ ಪರಿವರ್ತಣೆಯ ಪರ್ವ ಎಂದು ತಿಳಿದುಕೊಳ್ಳಬೇಕು. ಕಾರಾಗೃಹ ಇಲಾಖೆಯ ವಿವಿದ ಕೌಶಲ್ಯ ಅಭಿವೃದ್ದಿ ತರಬೇತಿಗಳನ್ನು, ಯೋಗ,ಧ್ಯಾನ, ಮನಪರಿವರ್ತನೆ ಮುಂತಾದ ಕಾರ್ಯಕ್ರಮಗಳನ್ನು ನಿವಾಸಿಗಳಿಗಾಗಿ ಆಯೋಜಿಸಲಾಗುತ್ತದೆ ನಎಂದು ಹೆಳಿದರು. ಈ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯು ನಿವಾಸಿಗಳಿಗಾಗಿ ತರಬೇತಿಗಳನ್ನ ಆಯೋಜಿಸಿ ನಿವಾಸಿಗಳ ಸರ್ವತೋಮುಖ ಪ್ರಗತಿಗಾಗಿ ಇಲಾಖೆಯ ಜೊತೆಗೆ ಕೈಜೊಡಿಸಿದ್ದು ಕಾರಾಗೃಹ ಇಲಾಖೆಯು ಸದಾ ಕಾಲ ಚಿರಋಣಿಯಾಗಿರುತ್ತದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾದ ಬೆಳಗಾವಿ ತರಬೇತಿ ಕೇಂದ್ರದ ಮುಖ್ಯ ಪಶುವೈಧ್ಯಾಧಿಕಾರಿಗಳಾದ ಡಾಽಽ ಮಹಾದೇವ ತೇಲಿ ಮಾತನಾಡಿ ಜೀವನದಲ್ಲಿ ನಡೆದ ಆಕಸ್ಮಿಕ ಘಟನೆಗೆ ಒಳಗಾಗಿ ತಾವು ಕಾರಾಗೃಹಕ್ಕೆ ಬಂದಿರಬಹುದು. ಆದರೆ ಇದು ತಾತ್ಕಾಲಿಕ ಮಾತ್ರ. ಇಲ್ಲಿಂದ ತಾವೆಲ್ಲ ಬಿಡುಗಡೆಯಾಗಿ ಹೋಗಲೇ ಬೇಕು ಕಾರಣ ಇಂತಹ ತರಬೇತಿಯು ತಮ್ಮ ಭಾವಿ ಜೀವನಕ್ಕೆ ಅತ್ಯಂತ ಉಪಯುಕ್ತವಾಗಿವೆ. ಮುಂದಿನ ದಿನಗಳಲ್ಲಿ ಇನ್ನು ಅನೇಕ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ಬಿಡುಗಡೆ ನಂತರ ಸಮಾಜದಲ್ಲಿ ಹಾಗೂ ತಮ್ಮ ಕುಟುಂಬ ವರ್ಗದವರಿಗೆ ಈ ತರಬೇತಿಯ ಕುರಿತು ಮಾಹಿತಿ ನೀಡಬೇಕು. ಹಾಗೂ ರೀಯಾಯಿತಿ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಬೇಕಾದರೆ ಜಿಲ್ಲಾ ಅಥವಾ ತಾಲೂಕ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು ಎಂದು ಹೇಳಿದರು. 

ನಿವೃತ್ತ ಜಂಟಿ ನಿರ್ದೇಶಕರಾದ ಡಾ.ಸಿ.ಬಿ,ಕೆಂಗಾರ ಮಾತನಾಡಿ,ತಾವೆಲ್ಲ ನಿವಾಸಿಗಳು ಅತ್ಯಂತ ಪ್ರಾಮಾಣಿಕತೆಯಿಂದ ತರಬೇತಿಯಲ್ಲಿ ಭಾಗವಹಿಸಿದ್ದು, ತಮ್ಮಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ವಿವಿದ ತರಬೇತಿಗಳನ್ನು ಆಯೋಜಿಸುವಲ್ಲಿ ನಮ್ಮಲ್ಲಿ ಉತ್ಸಾಹ ತುಂಬಿರುವಿರಿ ಎಂದು ಹೇಳಿದರು. 

ಎರಡು ದಿನಗಳ ತರಬೇತಿಯಲ್ಲಿ ತರಬೇತಿದಾರರು ವಿಡಿಯೋಗಳ ಮೂಲಕ ಸಮಗ್ರವಾದ ಮಾಹಿತಿ ನೀಡಿದರು. ತರಬೇತಿಯಲ್ಲಿ ಒಟ್ಟು 75 ನಿವಾಸಿಗಳು ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ತರಬೇತಿಯ ಕೈಪಿಡಿ ವಿತರಿಸಲಾಯಿತು. ನಿವಾಸಿಗಳಾದ ಮಹಾಂತೇಶ ಹೊಂಗಲ ಹಾಗೂ ಅಶೋಕ ರತ್ನಾಕರ ತರಬೇರತಿಯ ಕುರಿತು ಅನಿಸಿಕೆ ವ್ಯಕ್ತ ಪಡಿಸಿದರು. 

ವೇದಿಕೆಯಲ್ಲಿ ಕಾರಾಗೃಹದ ಜೈಲರ್ ರಾಜೇಶ ಧರ್ಮಟ್ಟಿ, ಉಪಾಧ್ಯಾಯರಾದ  ಶಶಿಕಾಂತ ಯಾದಗುಡೆ ಹಾಗೂ ಜಾನುವಾರು ಅಧಿಕಾರಿಗಳಾದ ಸಂಜಯ ಸನದಿ ಉಪಸ್ಥಿತರಿದ್ದರು.