ಲೈವ್ ವೆಬ್‌ಕಾಸ್ಟಿಂಗ್ ಕೇಂದ್ರ ಡಿ.ಸಿ., ಸಿಇಓ ಭೇಟಿ; ಸಿದ್ಧತೆಗಳ ಪರೀಶೀಲನೆ

Live Webcasting Center DC, CEO visits; reviews preparations

ಲೋಕದರ್ಶನ ವರದಿ 

ಲೈವ್ ವೆಬ್‌ಕಾಸ್ಟಿಂಗ್ ಕೇಂದ್ರ ಡಿ.ಸಿ., ಸಿಇಓ ಭೇಟಿ; ಸಿದ್ಧತೆಗಳ ಪರೀಶೀಲನೆ 


ಧಾರವಾಡ 18: ಪ್ರಸಕ್ತ ಸಾಲಿನ ಎಸ್‌.ಎಸ್‌.ಎಲ್‌.ಸಿ ವಾರ್ಷಿಕ ಪರೀಕ್ಷೆ-1 ನ್ನು ವ್ಯವಸ್ಥಿವಾಗಿ, ಪಾರದರ್ಶಕವಾಗಿ ನಿಯಮಾನುಸಾರ ಜರುಗಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸರಕಾರದ ಆದೇಶದಂತೆ ಪರೀಕ್ಷೆಗಳ ಲೈವ್ ವೆಬ್‌ಸ್ಟ್ರಿಮಿಂಗ್‌ಗಾಗಿ ಜಿಲ್ಲಾ ಪಂಚಾಯತಿಯಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನೇಮಕವಾದ ಅಧಿಕಾರಿ, ಸಿಬ್ಬಂದಿಗಳು ಪರೀಕ್ಷೆ ಕೇಂದ್ರಗಳ ಮೇಲೆ ನಿರಂತರ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅವರು ಇಂದು ಸಂಜೆ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರೊಂದಿಗೆ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಸ್ಥಾಪಿಸಿರುವ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಸಿದ್ಧತೆ ಪರೀಶೀಲಿಸಿ ಮಾತನಾಡಿದರು.  

ಜಿಲ್ಲೆಯಲ್ಲಿ ಒಟ್ಟು 106 ಪರೀಕ್ಷಾ ಕೇಂದ್ರಗಳಿದ್ದು, 1310 ಪರೀಕ್ಷಾ ಕೊಠಡಿಗಳಿವೆ. ಪರೀಕ್ಷಾ ಕೊಠಡಿ, ಮುಖ್ಯ ಪರಿಕ್ಷಕರ ಕೊಠಡಿ, ಕಾರಿಡಾರ್ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳು ಸೇರಿ 1522 ಸಿ.ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎಲ್ಲ 106 ಪರೀಕ್ಷಾ ಕೇಂದ್ರಗಳನ್ನು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1:30 ಗಂಟೆವರೆಗೆ ನಿರಂತರವಾಗಿ ನಿಗಾವಹಿಸಲು ಅಗತ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಿ, ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.  

ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಮಾತನಾಡಿ, ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ನಿರಂತರ ವಿದ್ಯುತ್, ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ನಿಯಮಬಾಹಿರ ವರ್ತನೆಗಳು ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಕಂಡುಬಂದರೆ ತಕ್ಷಣ ಸಂಬಂಧಿಸಿದವರಿಗೆ ಮಾಹಿತಿ ನೀಡಿ, ಕ್ರಮ ಜರುಗಿಸಲು ಸೂಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ಸಂಪರ್ಕ ಸಂಖ್ಯೆ  ನೀಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮುಕ್ತವಾಗಿ, ನಿರ್ಭಿತಿಯಿಂದ ಪರೀಕ್ಷೆ ಬರೆಯುವ ವಾತಾವರಣ ರೂಪಿಸಲಾಗಿದೆ ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ, ವೆಬ್ ಕಾಸ್ಟಿಂಗ್ ಕೇಂದ್ರದ ನೊಡಲ್ ಅಧಿಕಾರಿಯಾದ ಶಿಕ್ಷಣಾಧಿಕಾರಿ ಪ್ರಭಯ್ಯ ಕೆ. ಚಿಕ್ಕಮಠ ಸೇರಿದಂತೆ ಇತರರು ಇದ್ದರು. 

ಪರೀಕ್ಷಾ ವೇಳಾಪಟ್ಟಿ: ಮಾರ್ಚ್‌ 21 ರಿಂದ ಎಪ್ರೀಲ್ 4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ನಿಗದಿತ ದಿನದಂದು ಪರೀಕ್ಷೆಗಳ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆಯವರೆಗೆ ನಡೆಯಲಿವೆ.  

ಮಾರ್ಚ್‌ 21, 2025 ರಂದು ಪ್ರಥಮ ಭಾಷೆ, ಮಾರ್ಚ್‌ 24 ರಂದು ಗಣಿತ, ಮಾರ್ಚ್‌ 26 ರಂದು ದ್ವಿತೀಯ ಭಾಷೆ ಬೆಳಿಗ್ಗೆ 10 ರಿಂದ 1 ಗಂಟೆಯವರಿಗೆ, ಮಾರ್ಚ್‌ 29 ರಂದು ಸಮಾಜ ವಿಜ್ಞಾನ, ಎಪ್ರೀಲ್ 1 ರಂದು ಜೆ.ಟಿ.ಎಸ್‌. ವಿಷಯಗಳು, ಎಪ್ರೀಲ್ 2 ರಂದು ವಿಜ್ಞಾನ ಹಾಗೂ ಎಪ್ರೀಲ್ 4 ರಂದು ತೃತೀಯ ಭಾಷೆಯ ಪರೀಕ್ಷೆಗಳು  ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ನಡೆಯಲಿವೆ.  

ಪರೀಕ್ಷೆ ಕೇಂದ್ರ: ಧಾರವಾಡ ಗ್ರಾಮೀಣ ತಾಲೂಕಿನಲ್ಲಿ 16, ಧಾರವಾಡ ಶಹರ ತಾಲೂಕಿನಲ್ಲಿ 16, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 35, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 13, ಕಲಘಟಗಿ ತಾಲೂಕಿನಲ್ಲಿ 9, ಕುಂದಗೋಳ ತಾಲೂಕಿನಲ್ಲಿ 8, ನವಲಗುಂದ ತಾಲೂಕಿನಲ್ಲಿ 9 ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು ಜಿಲ್ಲೆಯಾದ್ಯಂತ 106  ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.  

ಜಾಗೃತ ದಳ: ಧಾರವಾಡ ಶಹರದಲ್ಲಿ 16, ಧಾರವಾಡ ಗ್ರಾಮೀಣದಲ್ಲಿ 16, ಹುಬ್ಬಳ್ಳಿ ಶಹರದಲ್ಲಿ 35, ಹುಬ್ಬಳ್ಳಿ ಗ್ರಾಮೀಣ 13, ಕಲಘಟಗಿ 9, ಕುಂದಗೋಳ 8, ನವಲಗುಂದ 9 ಒಟ್ಟು 106 ಸ್ಥಳೀಯ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.  

ಜಿಲ್ಲಾಮಟ್ಟದಲ್ಲಿ ಶಿಕ್ಷಣಾಧಿಕಾರಿಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಡಲ್ ಅಧಿಕಾರಿಗಳೆಂದು ನೇಮಿಸಲಾಗಿದೆ. ಹಾಗೆಯೇ ತಾಲೂಕಾ ಹಂತದಲ್ಲಿಯೂ ಸಹ ತಾಲೂಕಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಜಿಲ್ಲಾ ಪಂಚಾಯತ ಧಾರವಾಡ ಕಚೇರಿಯಲ್ಲಿ ಪರೀಕ್ಷಾ ಕೇಂದ್ರಗಳ ಘಟನಾವಳಿಗಳನ್ನು ವೀಕ್ಷಿಸಲು ಲೈವ್ ವೆಬ್ ಸ್ಟ್ರೀಮಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಂಬಂಧಿಸಿದ ಕಾರ್ಯಕ್ರಗಳನ್ನು ವೀಕ್ಷಣೆ ಮಾಡಲು ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯವರನ್ನು ನೇಮಕ ಮಾಡಲಾಗಿದೆ ಎಂದರು.  

(ಫೋಟೊ ಇವೆ)