ಜೈಲಿನಲ್ಲಿ ಸಾಹಿತ್ಯ ಕಮ್ಮಟ ಜೈಲಿನಲ್ಲಿರುವ ಅವಧಿ ಪರಿವರ್ತನೆಗೆ ಬಳಸಿಕೊಳ್ಳಬೇಕು: ಅಧ್ಯಕ್ಷ ಎಲ್.ಎನ್.ಮುಕುಂದರಾಜ್
Literature workshop for prison inmates
ಹಾವೇರಿ 19 : ಜೈಲಿನಲ್ಲಿರುವ ಅವಧಿಯನ್ನು ಪರಿವರ್ತನೆಗೆ ಬಳಸಿಕೊಳ್ಳಬೇಕು. ಇದಕ್ಕಾಗಿ ಪುಸ್ತಕಗಳನ್ನು ಓದಿರಿ ಜೊತೆಗೆ ಅನುಭವಗಳನ್ನು ದಾಖಲಿಸಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸಲಹೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಾವೇರಿ ಜಿಲ್ಲಾ ಜೈಲಿನಲ್ಲಿ ಮೂರು ದಿನಗಳವರೆಗೆ ಏರಿ್ಡಸಿರುವ ಕಾರಾಗೃಹವಾಸಿಗಳಿಗೆ ಸಾಹಿತ್ಯ ಕಮ್ಮಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯವು ಮನುಷ್ಯರನ್ನಾಗಿ ಮಾಡುತ್ತದೆ. ಪಂಪ, ಕುಮಾರವ್ಯಾಸ, ಕನಕದಾಸ, ಕುವೆಂಪು, ಬೇಂದ್ರೆ ಮೊದಲಾದವರು ಮಾನವೀಯ ಮೌಲ್ಯಗಳನ್ನು ತಮ್ಮ ಕೃತಿಗಳ ಮೂಲಕ ಬಿತ್ತಿದರು. ಕನ್ನಡದ ಆದಿ ಕವಿ ಪಂಪ 'ಮನುಷ್ಯ ಜಾತಿ ತಾಮೊಂದೇ ವಲಂ' ಎಂದು ಸಾರಿದ ಅಂದರೆ ಮನುಷ್ಯರಾದ ನಾವೆಲ್ಲ ಒಂದು ಎಂದು ಹೇಳಿದ. ಅಂಥವರ ಕೃತಿಗಳನ್ನು ಓದುವುದರ ಮೂಲಕ ಮಾನವೀಯತೆ ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು. ಹಾವೇರಿ ಜಿಲ್ಲೆಯು ಶರೀಫ, ಸರ್ವಜ್ಞ, ಕನಕದಾಸರ ಮೂಲಕ ಪ್ರಸಿದ್ಧವಾಗಿದೆ. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು 500 ವರ್ಷಗಳ ಹಿಂದೆಯೇ ಹೇಳಿದ್ದಾರೆ. ಆದರೆ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಅಲ್ಲದೆ ಹೆಣ್ಣಿಗಾಗಿ, ಆಸ್ತಿಗಾಗಿ, ಅಧಿಕಾರಕ್ಕಾಗಿ ಜಗಳವಾಡುತ್ತೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾದ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಕೈದಿಗಳಿಗೆ ಸಾಹಿತ್ಯ ಕಮ್ಮಟವು ವಿಶಿಷ್ಟವಾದುದು. ಸಾಹಿತ್ಯವು ಎಲ್ಲರನ್ನೂ ತಲುಪಬೇಕೆಂಬ ಉದ್ದೇಶದ ಈ ಕಮ್ಮಟವು ಸಾರ್ಥಕವಾಗಬೇಕು. ಈಮೂಲಕ ಸಾಹಿತ್ಯದಿಂದ ಬಿಡುಗಡೆಯಾಗಬೇಕು ಜೊತೆಗೆ ಓದುವುದರಿಂದ ಸಾಹಿತ್ಯವೂ ಬಿಡುಗಡೆಯಾಗುತ್ತದೆ ಎಂದರು. ಕಾನೂನು ಪಾಲಿಸದವರು ಸಮಾಜದಿಂದ ದೂರ ಮಾಡಿ ಜೈಲಿಗೆ ಕಳಿಸಲಾಗುತ್ತದೆ. ನಿಯಂತ್ರಣ ಕಳೆದುಕೊಂಡು ಕಾನೂನಿಗೆ ವಿರುದ್ಧವಾಗಿ ವರ್ತಿಸಿದಾಗ ಜೈಲು ಕಾಣುತ್ತೀರಿ. ಇದಕ್ಕಾಗಿ ಕಾನೂನಿನ ಪರವಾಗಿ ನಿಮ್ಮ ನಡೆ ಇರಲಿ. ಏಕೆಂದರೆ ಅಪರಾಧ- ಅಪರಾಧಿ ನಡುವಿನ ಸಂಬಂಧ ವಿಷವರ್ತುಲ. ಇಂಥ ವಿಷವರ್ತುಲದಿಂದ ಹೊರಬರಲು ಸಾಹಿತ್ಯದ ಓದು ನೆರವಾಗುತ್ತದೆ ಎಂದು ತಿಳಿವಳಿಕೆ ಹೇಳಿದರು.
ಸಾಹಿತ್ಯಕ್ಕೆ ಕೆಡುಕನ್ನು ಆಚೆಗೆ ನೂಕಿ ಒಳ್ಳೆಯದನ್ನು ಮಾಡುವ ಶಕ್ತಿಯಿದೆ ಜೊತೆಗೆ ಸಮಾಜದ ವಿರುದ್ಧ ಹೋಗದಂತೆ ತಡೆಯುವ ಶಕ್ತಿಯಿದೆ. ಹಾಗೆಯೇ ಅಪರಾಧ ಪ್ರಜ್ಞೆಯಿಂದ ಹೊರಬರಲು ಸಾಹಿತ್ಯ ನೆರವಾಗುತ್ತದೆ. ಇದಕ್ಕಾಗಿ ಪುಸ್ತಕಗಳನ್ನು ಓದಿರಿ ಎಂದರು.ಹಾವೇರಿ ಜಿಲ್ಲಾ ಪೊಲೀಷ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ.ಶಿರಕೋಳ, ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವ ಡಾ.ಸಿ.ಟಿ.ಗುರುಪ್ರಸಾದ್ ಹಾಗೂ ಹಾವೇರಿ ಜೈಲಿನ ಸಹಾಯಕ ಅಧೀಕ್ಷಕ ಖಿಲಾರಿ ಹಾಜರಿದ್ದರು.
ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 