ವೈದ್ಯ ಸಾಹಿತಿಗಳಿಗೆ ವೈದ್ಯಕೀಯ ಎಂಬುದು ಒಂದು ಮೂಲ ವೃತ್ತಿಯಾದರೆ, ಸಾಹಿತ್ಯ ಹವ್ಯಾಸವಾಗುತ್ತದೆ. ಇವೆರಡನ್ನು ಬೆಳೆಸಿಕೊಂಡು ಬಂದವರು ಉತ್ತಮ ಸಾಹಿತಿಗಳಾಗಿ ರೂಪುಗೊಳ್ಳುತ್ತಾರೆ. ಹಾಗೆಯೇ ಇಂದಿನ ಅನೇಕ ಪ್ರಸಿದ್ಧ ವೈದ್ಯರು ವೃತ್ತಿಯಲ್ಲಿ ಹೆಸರು ಗಳಿಸುವದರ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅಂಥವರಲ್ಲಿ ಡಾಽಽದಯಾನಂದ ನೂಲಿಯವರು ವೃತ್ತಿಯಿಂದ ವೈದ್ಯರಾದರೂ, ಪ್ರವೃತ್ತಿಯಿಂದ ಕನ್ನಡದ ಗಮನಾರ್ಹ ವೈದ್ಯ ಲೇಖಕರಲ್ಲೊಬ್ಬರು. ಕನ್ನಡದ ಮೂಲಕ ವೈದ್ಯ ಪರಿಕಲ್ಪನೆಗಳನ್ನು ಸಲೀಸಾಗಿ ಓದುಗರಿಗೆ ತಲುಪಿಸುವಲ್ಲಿ ಅವರು ನಿಸ್ಸೀಮರು.
ಹುಕ್ಕೇರಿಯ ಮೂಲದವರಾದ ಡಾ.ದಯಾನಂದ ನೂಲಿಯವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ 1963ರ ಸಪ್ಟೆಂಬರ್ 1ರಂದು ಜನಿಸಿದರು. ತಂದೆ ಈರ್ಪ, ತಾಯಿ ಕಮಲಮ್ಮ. ಸುಸಂಸ್ಕೃತ ನೂಲಿ ಮನೆತನದಲ್ಲಿ ಬೆಳೆದ ದಯಾನಂದರು ಹುಕ್ಕೇರಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯವರೆಗೆ ಓದಿ, ಅಲ್ಲಿಯ ಶ್ರೀ ಕಾಡಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿವರೆಗೆ ಪೂರೈಸಿದರು. ನಂತರ ಧಾರವಾಡ ಕಿಟೆಲ್ ಪದವಿಪೂರ್ವ ಕಾಲೇಜಿನಿಂದ ಪಿ.ಯು.ಸಿ. ವಿಜ್ಞಾನವನ್ನು ಪೂರ್ಣಗೊಳಿಸಿದರು. ದಯಾನಂದ ಅವರು ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಇರುವದರಿಂದ ಎಂ.ಬಿ.ಬಿ.ಎಸ್. ಪದವಿಯನ್ನು ಬೆಳಗಾವಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮುಗಿಸಿ, ಎಂ.ಎಸ್.ಸ್ನಾತಕೋತ್ತರ ಪದವಿಯನ್ನು ಶಸ್ತ್ರಚಿಕಿತ್ಸೆಯಲ್ಲಿ ಅದೇ ಕಾಲೇಜಿನಿಂದಲೇ ಪಡೆದುಕೊಂಡರು.
1991ರಲ್ಲಿ ಡಾ. ದಯಾನಂದ ನೂಲಿಯವರು ಘಟಪ್ರಭಾದ ಜೆ.ಜಿ.ಸಹಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯನ್ನು ಪ್ರಾರಂಭಿಸಿದರು. ವೃತ್ತಿಯೊಂದಿಗೆ ಅವರು ಕೊಯಿಮುತ್ತೂರದ ಡಾ. ವೆಂಕಟೇಶ ಅವರಲ್ಲಿ ಉದರದರ್ಶಕ ಶಸ್ತ್ರಚಿಕಿತ್ಸೆ ತರಬೇತಿಯನ್ನು ಪಡೆದರು. ಅಲ್ಲದೇ ಮುಂಬೈನ ಜಾನಸನ್ ಮತ್ತು ಜಾನಸನ್ ಸಂಸ್ಥೆಯಲ್ಲಿ ಹೆಚ್ಚಿನ ತರಬೇತಿ, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ಮಹಾವಿದ್ಯಾಲಯದಿಂದ ಲ್ಯಾಪರೋಸ್ಕೋಪಿಕ್ ಹರ್ನಿಯಾ ಶಸ್ತ್ರಚಿಕಿತ್ಸೆಯಲ್ಲಿ ತರಬೇತಿಯನ್ನು ಪಡೆದರು. 1996ರಲ್ಲಿ ಡಾ. ನೂಲಿಯವರು ಚಿಕ್ಕೋಡಿ ನಗರದಲ್ಲಿ ನೂತನ ಕಟ್ಟಡದಲ್ಲಿ ಸ್ವತಂತ್ರ ಆಸ್ಪತ್ರೆಯನ್ನು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಆರಂಭಿಸಿದರು. ಡಾ. ದಯಾನಂದ ನೂಲಿಯವರು ಕಡಿಮೆ ಸೇವಾ ಶುಲ್ಕದೊಂದಿಗೆ ಬಡಜನರ ಸೇವೆಗೆ ಮುಡುಪಾಗಿಟ್ಟು ಜನಾನುರಾಗಿಯಾದರು. ಡಾ.ದಯಾನಂದ ಅವರು ಮಹಾರಾಷ್ಟ್ರದ ಸುಸಂಸ್ಕೃತ ಮನೆತನದ ವೈದ್ಯೆ ಕಲ್ಪನಾ ಅವರನ್ನು ಮದುವೆಯಾದರು. ಡಾ.ಕಲ್ಪನಾರವರು ಕನ್ನಡ ವಾತಾವರಣವನ್ನು ಸವಾಲಾಗಿ ಸ್ವೀಕರಿಸಿ ಪತಿಯ ಎಲ್ಲ ಕಾರ್ಯಗಳಿಗೂ ಹೆಗಲೆಣೆಯಾಗಿ ನಿಂತಿರುವುದು ಅಭಿಮಾನಪಡುವಂತಹುದು.
ಡಾ.ದಯಾನಂದ ನೂಲಿಯವರು ವೃತ್ತಿಯಿಂದ ವೈದ್ಯರಾದರೂ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು, ಹೆಚ್ಚಿನ ಸಮಯವನ್ನು ಸಾಹಿತ್ಯಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದಾರೆ. ಅವರ ತಾಯಿ ಕಮಲಮ್ಮನವರು ಜನಪದ ಹಾಡುಗಳನ್ನು ಮತ್ತು ಬಸವಣ್ಣನವರ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಾಲ್ಯದಲ್ಲಿದ್ದಾಗಲೇ ತಾಯಿಯವರಿಂದ ಸಾಹಿತ್ಯಿಕ ಪ್ರಭಾವ ಬೀರಿತ್ತು. ಅಲ್ಲದೇ ಪಿಯುಸಿಯಲ್ಲಿದ್ದಾಗ ಡಾ.ವಾಮನ ಬೇಂದ್ರೆ ಮತ್ತು ಡಾ.ಜಿ.ಎಂ ಹೆಗಡೆ ಅವರು ದಯಾನಂದರವರಿಗೆ ಸಾಹಿತ್ಯಿಕವಾಗಿ ಬೆಳೆಯಲು ಪ್ರೇರಣೆಯಾಗಿದ್ದರು. ದಯಾನಂದರವರಿಗೆ ನಿಡಸೋಸಿ, ಚಿಂಚಣಿ ಮತ್ತು ಚಿಕ್ಕೋಡಿ ಮಹಾಧೀಶರುಗಳ ಕನ್ನಡ ಪ್ರೀತಿ ಅವರನ್ನು ಸಾಹಿತ್ಯದಲ್ಲಿ ತೊಡಗಿಸಿತು. ಡಾ.ನೂಲಿಯವರು 2004ರಲ್ಲಿ ನೇಹಲ್ ಕಥಾಸಂಕಲನವನ್ನು, 2009ರಲ್ಲಿ ವಚನಗಳಲ್ಲಿ ವೈದ್ಯಕೀಯ ಪರಿಕಲ್ಪನೆ ಎಂಬ ವೈಜ್ಞಾನಿಕ ಕೃತಿಯನ್ನು ಹಾಗೂ 2022ರಲ್ಲಿ ಮರುಳ ಶಂಕರ ದೇವರು - ಅನುಭಾವ ಯಾತ್ರೆ ಬೃಹತ್ ಗ್ರಂಥವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅಲ್ಲದೇ ಅವರು ಡಾಪ್ರಭಾಕರ ಕೋರೆಯವರ ಅಭಿನಂದನ ಗ್ರಂಥ “ಪ್ರಭಾಂಕಲಿ’ಯ ಸಂಪಾದನೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಭವರೋಗ ವೈದ್ಯ ಅಣ್ಣ ಬಸವಣ್ಣ, ಶಿವನಲ್ಲಿದೆ ರೋಗ ರುಜಿನಗಳಿಗೆ ಓಷಧ, ಕಾಣದ ವೈರಾಣು ಕೊರೋನಾಕ್ಕೆ ವಚನ ನಿಗ್ರಹ ಮುಂತಾದ ವೈದ್ಯಕೀಯ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ನೇಹಲ್ ಕಥಾ ಸಂಕಲನವು ಚರಿತ್ರೆಯಿಂದ ಹಿಡಿದು ಆಧುನಿಕ ಕಾಲದವರೆಗೆ ತನ್ನ ಹರವನ್ನು ಚಾಚುತ್ತದೆ. ನೇಹಲ್ ಪ್ರೀತಿಯೊಂದೇ ಸಾಲದು, ದೇಶ-ದೇಹ ವಿಭಜನೆ, ಮೌನ ಮಾಡಿದ ತಪ್ಪುಗಳು ಕಥೆಗಳಲ್ಲಿ ಚರಿತ್ರೆಯ ದಾಖಲೆಯೂ ಇದೆ. ವಿಜಯಗರದ ದೊರೆ ಹಾಗೂ ಮುಸ್ಲಿಂ ದೊರೆಗಳ ರಾಜಕೀಯ ಕುಟುಂಬಕ್ಕೆ ಬಲಿಯಾದ ನೇಹಲ್ ತನ್ನ ಆತ್ಮಕಥೆಯನ್ನು ಹೃದಯಂಗಮವಾಗಿ ನಿವೇದಿಸಿಕೊಳ್ಳುವ ಪರಿ ಮಾರ್ಮಿಕವಾಗಿದೆ. ಚರಿತ್ರೆಯ ರಾಜಕೀಯ, ಸಾಮಾಜಿಕ ಸಮಸ್ಯೆಗಳನ್ನು ಡಾ.ನೂಲಿಯವರು ತುಂಬಾ ನಿರ್ಲಿಪ್ತವಾಗಿ ಹೆಣೆದಿದ್ದಾರೆ. ಅವರ ‘ವಚನಗಳ ಆರೋಗ್ಯದ ಪರಿಕಲ್ಪನೆ’ ಕೃತಿಯು ದೈಹಿಕ ಆರೋಗ್ಯದ ಬಗೆಗೆ ಹನ್ನೆರಡನೆಯ ಶತಮಾನದ ವಚನಗಳೊಂದಿಗೆ ವರ್ಣಿಸಲಾಗಿದ್ದು, ವಚನಗಳಲ್ಲಿ ಅಡಕವಾದ ಆರೋಗ್ಯದ ಬಹುತರ ಎಲ್ಲ ಆಯಾಮಗಳನ್ನು ತೆರೆದಿಟ್ಟಿದೆ. ಜೀವನ ಮೌಲ್ಯಗಳು ಅಧಃಪತನಗೊಳ್ಳುತ್ತಿರುವ ಸಂದರ್ಭದಲ್ಲಿ ಕೃತಿಯಲ್ಲಿಯ ವಚನಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಡಾ.ದಯಾನಂದ ನೂಲಿಯವರ ‘ಮರುಳ ಶಂಕರ ದೇವರು; ಅನುಭಾವ ಯಾತ್ರೆ ಕೃತಿಯು 752 ಪುಟಗಳನ್ನು ಹೊಂದಿದ್ದು, ಮರುಳ ಶಂಕರ ದೇವರ ಬಾಲ್ಯಜೀವನ, ಗೃಹತ್ಯಾಗ, ಯೋಗಾಭ್ಯಾಸ, ಲೋಕಪರ್ಯಟನ ಪಥದ ಚಿತ್ರಣ, ಸೂಫಿ ತತ್ವದ ಚಿಂತನೆಗಳು, ನಾಥ ಸಂಪ್ರದಾಯದ ಇತಿಹಾಸ ಮೊದಲಾದ ವಿವರಗಳು ಸರಳ ಭಾಷೆಯಲ್ಲಿ ಆಪ್ತವಾಗಿ ಮೂಡಿಬಂದಿವೆ. ಹದಿನೈದು ಅಧ್ಯಾಯಗಳಲ್ಲಿ ಡಾ.ನೂಲಿಯವರು ಹೃದಯಂಗಮವಾಗಿ ಚಿತ್ರಿಸಿದ್ದು, ಮರುಳಶಂಕರದೇವರು ಅಫಘಾನಿಸ್ತಾನ ದೇಶದಿಂದ ಶರಣ ಧರ್ಮದ ಕಡೆಗೆ ಆಕರ್ಷಿತರಾಗಿ ಕಲ್ಯಾಣದವರೆಗೆ ಬರುವವರೆಗೆ ಭೇಟಿಯಾದ ಸ್ಥಳಗಳು, ನಾಥ-ಸೂಫಿ ಮೊದಲಾದ ಪಂಥಗಳು, ಅನೇಕ ಶರಣರ ಒಡನಾಟದ ಕ್ಷಣಗಳನ್ನು ಅವರೇ ನಿರೂಪಿಸುತ್ತ ಹೊಗಳುತ್ತಾರೆ. ಮರುಳಶಂಕರ ದೇವರ ಜೀವನದ ವಾಸ್ತವಿಕ ವಿವರಗಳು, ಸಾಧನೆಗಳ ನೈಜ ವಿವರಗಳು ಈ ಕೃತಿಯಲ್ಲಿ ಆಪ್ತವಾಗಿ ಮೂಡಿವೆ. ಈ ಕೃತಿಯು ಶರಣ ಸಾಹಿತ್ಯಕ್ಕೆ ಅದ್ಭುತ ಕೊಡುಗೆಯಾಗಿದೆ.
ಡಾ.ದಯಾನಂದ ನೂಲಿಯವರು 1996ರಲ್ಲಿ ತಮ್ಮ ನೂತನ ಆಸ್ಪತ್ರೆಯ ನೆಲಮಹಡಿಯಲ್ಲಿ ‘ಸಿರಿಗನ್ನಡ ಬಳಗ’ ವನ್ನು ಗಡಿನಾಡಿನ ಸಾಹಿತ್ಯಾಸಕ್ತರೊಂದಿಗೆ ಪ್ರಾರಂಭಿಸಿದರು. ಶ್ರೀಗಳ ಆಶೀರ್ವಾದದೊಂದಿಗೆ, ಸಿರಿಗನ್ನಡ ಬಳಗವನ್ನು ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರು ಉದ್ಘಾಟಿಸಿದರು. ಡಾ.ಗುರುಲಿಂಗ ಪಾಪಸೆ, ಡಾ.ಪಾಟೀಲ ಪುಟ್ಟಪ್ಪ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ಗಿರಡ್ಡಿ ಗೋವಿಂದರಾಜ, ಡಾ.ಹಂಪನಾ ದಂಪತಿಗಳು ಮುಂತಾದ ಕನ್ನಡ ದಿಗ್ಗಜರನ್ನು ಕರೆಸಿ ಗಡಿನಾಡಿನ ಸಾಹಿತ್ಯಾಸಕ್ತರಿಗೆ ಪರಿಚಯಿಸಿದರು. ಗಡಿನಾಡಿನ ಸಾಹಿತಿಗಳಾದ ಪ್ರೊ.ಎಸ್.ವೈ. ಹಂಜಿ, ಡಾ. ಅನಿಲ ಕಮತಿ, ಪ್ರೊ.ಚಂದ್ರಕಾಂತ ಪೋಕಳೆ, ಡಾ.ಪಿ.ಜಿ.ಕೆಂಪಣ್ಣವರ, ಶ್ರೀಪಾದ ಕುಂಬಾರ ಮುಂತಾದ ಸಮಾನ ಮನಸ್ಕ ಸಾಹಿತಿಗಳು ಡಾ.ದಯಾನಂದ ನೂಲಿಯವರ ಕನ್ನಡ ಕೆಲಸಕ್ಕೆ ಬೆಂಗಾವಲಾಗಿ ನಿಂತು ಪ್ರೋತ್ಸಾಹಿಸಿದರು. ಸಿರಿಗನ್ನಡ ಬಳಗದಿಂದ ಇಲ್ಲಿಯವರೆಗೆ 9 ಕೃತಿಗಳು ಪ್ರಕಟಗೊಂಡಿರುವುದು ಹೆಮ್ಮೆ ತರುವಂತಹುದು. ಗಡಿಭಾಗದ ಚಿಕ್ಕೋಡಿಯಲ್ಲಿ ಕನ್ನಡದ ಕೆಲಸಗಳನ್ನು ಹಿರಿಯ ಸಾಹಿತಿಗಳೊಂದಿಗೆ ಅವರು ಮುನ್ನಡೆಸುತ್ತಿದ್ದು, ಕನ್ನಡ ಮನಸ್ಸುಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಡಾ.ನೂಲಿಯವರು ಕಮಲಮ್ಮ ನೂಲಿ ಪ್ರತಿಷ್ಠಾನದಿಂದ ಚಿಕ್ಕೋಡಿಯ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಳ್ಲಿ ಉಚಿತವಾಗಿ ವೈದ್ಯಕೀಯ ಶಿಬಿರಗಳನ್ನು ಪ್ರತಿ ತಿಂಗಳು ನಿರಂತರವಾಗಿ ಏರಿ್ಡಸುತ್ತಾ ಮುನ್ನಡೆದಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವದ ಡಾಽಽದಯಾನಂದ ಪರಿಣಿತ ವೈದ್ಯರಾಗಿ ಮೂರು ದಶಕಗಳಿಗೂ ಕಾಲ ಗ್ರಾಮೀಣ ಜನಸೇವೆಯಲ್ಲಿ ತೊಡಗಿಕೊಂಡು ಆದರ್ಶಪ್ರಾಯರಾಗಿದ್ದಾರೆ. ಅಲ್ಲದೇ ಪ್ರತಿವರ್ಷ ಪ್ರತಿಷ್ಠಾನದಿಂದ ಮಹಿಳಾ ಸಾಧಕರನ್ನು ಗೌರವಿಸುತ್ತಿರುವುದು ಅನುಪಮವಾದುದು. ಅವರು ಕರ್ನಾಟಕ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕೋಡಿ ತಾಲೂಕಾ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಡಾಽಽನೂಲಿಯವರು ಕಸಾಪ ಅಧ್ಯಕ್ಷರಾದ ಅವಧಿಯಲ್ಲಿ ತಾಲೂಕು ಮಟ್ಟದ ಎರಡು ಸಾಹಿತ್ಯ ಸಮ್ಮೇಳನಗಳನ್ನು ಜರುಗಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಅಲ್ಲದೇ 2022ರಲ್ಲಿ ಚಿಕ್ಕೋಡಿಯಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಹಿಂದೆ ಇವರದೂ ಪ್ರಮುಖ ಪಾತ್ರವಿದೆ. ಡಾ. ನೂಲಿಯವರ ವೈದ್ಯಕೀಯ ಹಾಗೂ ಸಾಹಿತ್ಯಿಕ ಸೇವೆಯನ್ನು ಮೆಚ್ಚಿ ನಾಡಿನ ಅನೇಕ ಸಂಘಸಂಸ್ಥೆಗಳು ಮತ್ತು ಮಠ ಮಾನ್ಯಗಳು ಅವರನ್ನು ಗೌರವಿಸಿವೆ.
ಡಾ. ದಯಾನಂದ ನೂಲಿ ಅವರ ಸೇವೆ, ಸಾಧನೆ, ಪರಿಶ್ರಮ ಅಗಾಧವಾದುದು. ಅವರು ವೈದ್ಯಕೀಯ ವೃತ್ತಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಹೃದಯ ಮನೋಭಾವ, ಶ್ರೇಷ್ಠ ಮಾನವೀಯ ಗುಣಗಳನ್ನು ಹೊಂದಿದ ಡಾ ನೂಲಿಯವರು ಜನಾನುರಾಗಿಗಳಾಗಿದ್ದಾರೆ. ಸಂಪರ್ಕಿಸಿ 9448133510.
- ಸುರೇಶ ಗುದಗನವರ
- * * * -