ಮಹಿಳೆಯರು ಅಜ್ಞಾನ ಮುಕ್ತರಾಗಲು ಸಾಕ್ಷರತೆ ಒಂದು ಸಾಧನ

ಮಹಿಳೆಯರು ಅಜ್ಞಾನ   ಮುಕ್ತರಾಗಲು ಸಾಕ್ಷರತೆ ಒಂದು ಸಾಧನ  Literacy is a tool for women to become free from ignorance.

ಧಾರವಾಡ  17: ವ್ಯಕ್ತಿಯ ಬದುಕಿನಲ್ಲಿ ಶಿಕ್ಷಣವು ಒಂದು ಶಕ್ತಿ. ಮಹಿಳೆಯರು ಅಜ್ಞಾನ ಹಾಗೂ ಶೋಷಣೆಯಿಂದ ಮುಕ್ತವಾಗಲು ಸಾಕ್ಷರತೆ ಒಂದು ಸಾಧನವಾಗಿದೆ ಎಂದು ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅಭಿಪ್ರಾಯಪಟ್ಟರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ “ಶಿಕ್ಷಣ ಮಂಟಪ”ವು, ಧಾರವಾಡದ ಶ್ರೀ ಸತ್ಯಸಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲ್ಲಿ ವಿಶ್ವಸಾಕ್ಷರತಾ ದಿನಾಚರಣೆಯ ನಿಮಿತ್ತ ಸತ್ಯಸಾಯಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಕ್ಷರತೆ ಮತ್ತು ಮಹಿಳಾ ಸಬಲೀಕರಣ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  

ಇಂದು ಮಹಿಳೆಯರು ತಮ್ಮ ಶೋಷಣೆಗೆ ನಿಜವಾದ ಕಾರಣವನ್ನು ಅಕ್ಷರ ಕಲಿಯುವುದರ ಮೂಲಕ ಅರಿತುಕೊಳ್ಳಬೇಕಿದೆ. ಸಾಕ್ಷರತೆಯ ಜೊತೆಗೆ ಅರಿವೂ ಸಹ ಮುಖ್ಯ. ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಸ್ವಾವಲಂಬಿಯಾಗಿ, ಸಶಕ್ತಳಾಗಿ ಬದುಕಲು ಸಾಕ್ಷರತೆಯೇ ಪ್ರಭಲ ಅಸ್ತ್ರವಾಗಿದೆ. ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಮಹಿಳೆ ಧ್ವನಿ ಎತ್ತಲು ಸಾಕ್ಷರತೆ ಅಗತ್ಯವಾಗಿದೆ. ಮಹಿಳೆಯರನ್ನು ಸಬಲಗೊಳಿಸಲು ಧಾರವಾಡದ ವನಿತಾ ಸೇವಾ ಸಮಾಜದ ಭಾಗೀರಥಿಬಾಯಿ ಪುರಾಣಿಕ, ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ಪಾತ್ರ ಅನನ್ಯವಾದುದು ಎಂದು ಸ್ಮರಿಸಿದರು.  

ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸಾಕ್ಷರತೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಾಕ್ಷರತೆ ನಮ್ಮ ದೇಶದ ಪ್ರತಿಷ್ಠೆಯ ಸಂಕೇತ. ಸಾಕ್ಷರತಾ ಕಾರ್ಯಕ್ರಮವು  ತೊಂಬತ್ತರ ದಶಕದಲ್ಲಿ ಸ್ವಾತಂತ್ರ್ಯಾ ನಂತರದ ಎರಡನೇ ಆಂದೋಲನವಾಗಿ ರೂಪಗೊಂಡು ಇತಿಹಾಸ ಸೃಷ್ಟಿಸಿತು. ಇಂದು ನಾವು ಎಂತಹ ಭಾರತದಲ್ಲಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ಅಶೋತ್ತರಗಳನ್ನು ಮಹಿಳೆ ಸಾಕ್ಷರತೆ ಮೂಲಕ ಅರಿಯಬೇಕೆಂದು ಹೇಳಿದರು.  

ವೇದಿಕೆಯಲ್ಲಿ ಧಾರವಾಡದ ಸತ್ಯಸಾಯಿ ಎಜ್ಯುಕೇಶನ್ ಟ್ರಸ್ಟ್‌ ಆಡಳಿತ ಮಂಡಳಿ ಕಾರ್ಯದರ್ಶಿ ಎನ್‌. ಮಂಜುನಾಥ ಹಾಗೂ ಸತ್ಯಸಾಯಿ ಎಜ್ಯುಕೇಶನ್ ಟ್ರಸ್ಟ್‌ ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ನಾಡಿಗೇರ, ಶಂಕರ ಕುಂಬಿ, ಎನ್‌. ವಾಯ್‌. ಸುಣಗಾರ, ಅಶ್ವಿನಿ ಇಂಚಲ ಮುಂತಾದವರಿದ್ದರು.  

ಶೈಕ್ಷಣಿಕ ನಿರ್ದೇಶಕ ಜಿ.ಎಂ. ಗಣಾಚಾರ, ಶ್ರೀಶೈಲ ರಾಚಣ್ಣವರ ಮಾತನಾಡಿದರು. ಕ.ವಿ.ವ. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಸಾಕ್ಷರತಾ ಕಾರ್ಯಕ್ರಮದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವಿಜಯಕಲಾ ಬಡಿಗೇರ ಅವರನ್ನು  ಕ.ವಿ.ವ. ಸಂಘದ ಪರವಾಗಿ ಗಣ್ಯರು ಸನ್ಮಾನಿಸಿ, ಗೌರವಿಸಿದರು.  

ಪ್ರೊ. ಸವಿತಾ ಪೋತದಾರ ಸ್ವಾಗತಿಸಿ, ನಿರೂಪಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಎಲಿಗಾರ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ, ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಣ ಮಂಟಪದ ಸಲಹಾ ಸಮಿತಿ ಸದಸ್ಯರು ಸೇರಿದಂತೆ ಪದವಿ ವಿದ್ಯಾರ್ಥಿನಿಯರು ಇದ್ದರು.