ಹಿಂದೂ ನಿರಾಶ್ರಿತರ ಪಟ್ಟಿ: ಯುಪಿ ಸರ್ಕಾರದಿಂದ ಕೇಂದ್ರಕ್ಕೆ ರವಾನೆ

ಲಕ್ನೋ, ಜನವರಿ, 13,ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದು, ಉತ್ತರ ಪ್ರದೇಶದ 19 ಜಿಲ್ಲೆಗಳಲ್ಲಿ ವಾಸವಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ರಾಜ್ಯ ಸರಕಾರ ಕೇಂದ್ರಕ್ಕೆ ರವಾನೆ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಪ್ರಕ್ರಿಯೆಗೆ  ಕೇಂದ್ರ ಚಾಲನೆ ನೀಡಿದ ನಂತರ ಪಟ್ಟಿಯನ್ನು  ಕಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಯುಪಿ  ಪಾತ್ರವಾಗಿದೆ.  ರಾಜ್ಯ ಸರ್ಕಾರ ಸಿದ್ಧಪಡಿಸಿದ, ಉತ್ತರ ಪ್ರದೇಶ ಮೈನ್ ಆಯೇ ಪಾಕಿಸ್ತಾನ್, ಅಫ್ಘಾನಿಸ್ತಾನ್ ಏವಂ ಬಾಂಗ್ಲಾದೇಶ್ ಕೇ ಶರಣಾರ್ಥಿಯೊಂ ಕಿ ಆಪ್ಬೀತಿ ಕಹಾನಿ  ಎಂಬ ವರದಿಯಲ್ಲಿ ನಿರಾಶ್ರಿತರ ವೈಯಕ್ತಿಕ ಕಥೆ, ಬವಣೆ  ವಿವರಿಸಲಾಗಿದೆ.

ಕಳೆದ ವಾರ ಗೃಹ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸವಿರುವ ನಿರಾಶ್ರಿತರನ್ನು ಪತ್ತೆ ಹಚ್ಚಿ  ಸರ್ಕಾರಕ್ಕೆ ಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು. ಈ ಅಂಕಿ ಅಂಶಗಳನ್ನು ಕ್ರೋಢೀಕರಿಸಿದಾಗ ಸುಮಾರು 40 ಸಾವಿರ ಮುಸ್ಲಿಮೇತರ ಅಕ್ರಮ ವಲಸಿಗರು ಉತ್ತರ ಪ್ರದೇಶದಲ್ಲಿ ವಾಸವಾಗಿರುವುದು ಕಂಡುಬಂದಿದೆ.ಆಗ್ರಾ, ರಾಯಬರೇಲಿ, ಸಹರಣಪುರ, ಗೋರಖ್ಪುರ, ಅಲೀಗಢ, ರಾಂಪುರ, ಮುಝಫರ್ ನಗರ, ಹಾಪುರ, ಮಥುರಾ, ಕಾನ್ಪುರ, ಪ್ರತಾಪ್ ಗಢ, ವಾರಣಾಸಿ, ಅಮೇಠಿ, ಝಾನ್ಸಿ, ಬಹರೀಚ್, ಲಖೀಂಪುರ ಖೇರಿ, ಲಕ್ನೋ, ಮೀರಠ್ ಮತ್ತು ಪಿಲಿಬಿಟ್ ಸೇರದಂತೆ ಒಟ್ಟು 19 ಜಿಲ್ಲೆಗಳಲ್ಲಿ ಇವರು ವಾಸವಿದ್ದಾರೆ ಎನ್ನಲಾಗಿದೆ.