ಜೀವನವೆಂದರೆ ನಮಗಾಗಿ ಬದುಕುವುದಲ್ಲ, ಬೇರೆಯವರಿಗಾಗಿಯೂ ಬದುಕಬೇಕು

ಜೀವನವೆಂದರೆ ನಮಗಾಗಿ ಬದುಕುವುದಲ್ಲ, ಬೇರೆಯವರಿಗಾಗಿಯೂ ಬದುಕಬೇಕು Life is not about living for ourselves, we should live for others too.

ಹಾವೇರಿ 16 : ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ. ಮರ ತನ್ನ ನೆರಳನ್ನು ತಾನು ಅನುಭವಿಸುವುದಿಲ್ಲ. ಜೀವನವೆಂದರೆ ನಮಗಾಗಿ ಬದುಕುವುದಲ್ಲ, ಬೇರೆಯವರಿಗಾಗಿಯೂ ಬದುಕಬೇಕು. ಅದುವೇ ಜೀವನ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.

ತಾಲೂಕಿನ ಅಗಡಿ ಗ್ರಾಮದಲ್ಲಿ ರೇಣುಕಾದೇವಿ ಜಾತ್ರಾ ಮಹೋತ್ಸವದ ಧರ್ಮದರ್ಶನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.ನಮ್ಮ ನಡೆಯಲ್ಲಿ ವ್ಯತ್ಯಾಸವಾದರೆ ನಮ್ಮ ಮುಂದಿನ ಪೀಳಿಗೆ ಕೆಡುತ್ತದೆ. ನಮ್ಮ ನುಡಿಯಲ್ಲಿ ವ್ಯತ್ಯಾಸವಾದರೆ ನಮ್ಮ ಸಂಬಂಧಗಳು ಕೆಡುತ್ತವೆ. ನಮ್ಮ ನೋಟದಲ್ಲಿ ವ್ಯತ್ಯಾಸವಾದರೆ ನಮ್ಮ ಮನಸ್ಸು ಕೆಡುತ್ತದೆ. ನಮ್ಮ ನಡೆ, ನುಡಿ, ನೋಟ ಸರಿಯಿದ್ದರೆ ನಮ್ಮ ಬದುಕು ಸುಂದರವಾಗಿರುತ್ತದೆ. ಅಮ್ಮನ ಮುಂದೆ, ಅನ್ನದ ಮುಂದೆ ಯಾವತ್ತೂ ದುರಹಂಕಾರ ತೋರಿಸಬಾರದು. ಅಮ್ಮ ಇಲ್ಲ ಅಂದ್ರೆ ಜೀವನಾನೆ ಇಲ್ಲ, ಅನ್ನ ಇಲ್ಲ ಅಂದ್ರೆ ನಾವೇ ಇರೋದಿಲ್ಲ. ಎರಡೂ ದೇವರ ಸಮಾನ. ನಾವು ಎಷ್ಟೇ ದೊಡ್ಡ ಸ್ಥಾನಕ್ಕೇರಿದರೂ ತಂದೆ ತಾಯಿ ಆಶೀರ್ವಾದಕ್ಕಿಂತ ಮಿಗಿಲಾದ ಸಂಪತ್ತು ಬೇರೆ ಇಲ್ಲ. ನಿಲ್ಲಲು ಕಲಿಸಿದ ನಿನ್ನ ತಾಯಿಯನ್ನು ಬೀಳದಂತೆ ನೋಡಿಕೊಳ್ಳುವುದು ನಿನ್ನ ಕರ್ತವ್ಯ. ತಲೆ ಎತ್ತಿ ಕಲಿಸಿದ ನಿನ್ನ ತಂದೆಯನ್ನು ತಲೆತಗ್ಗಿಸದಂತೆ ನೋಡಿಕೊಳ್ಳುವುದು ಕೂಡ ನಿನ್ನ ಕರ್ತವ್ಯ. ದೇವರ ಹೆಸರಿನಲ್ಲಿ ಉಪವಾಸ ಮಾಡುವುದು ಸಾಧನೆಯಲ್ಲ. ತಂದೆ ತಾಯಿ ಉಪವಾಸ ಇರದಂತೆ ನೋಡಿಕೊಳ್ಳುವುದು ಸಾಧನೆಯಾಗಬೇಕು ಎಂದೂ ಹನುಮಂತಗೌಡ ತಿಳಿಸಿದರು.ಮುಖ್ಯ ಶಿಕ್ಷಕ ಯಲ್ಲಪ್ಪ ಓಲೇಕಾರ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಎನ್ನುವುದು ತಂದೆ ತಾಯಿಯ ನಡತೆಯಿಂದ ಬಂದಿರುತ್ತದೆ. ಮಗಳಿಗೆ ತಾಯಿಯ ನಡತೆ, ಮಗನಿಗೆ ತಂದೆಯ ದುಡಿಮೆ ಆದರ್ಶವಾಗಿರಬೇಕು. ಮಕ್ಕಳಿಗೆ ತಾಯ್ತಂದೆಯರೇ ಮಾದರಿಯಾಗಬೇಕು. ಶಿಕ್ಷಣ, ಸಂಸ್ಕಾರ, ಸಂಸ್ಕೃತಿಯ ಬೀಜಗಳನ್ನು ಬಿತ್ತಬೇಕು ಎಂದರು.

ಅಮ್ಮನವರ ತುಲಾಭಾರ, ರೈತರ ಸನ್ಮಾನ: ರೇಣುಕಾದೇವಿ ದೇವಸ್ಥಾನದ ಅಧ್ಯಕ್ಷೆ ಎಲ್ಲಮ್ಮ ಪೂಜಾರ ಅಮ್ಮನವರನ್ನು ಗೋವಾದ ಮಂಜುನಾಥ ಪೂಜಾರ, ಗದಗ ಬೆಟಗೇರಿಯ ನಾಗಪ್ಪ ಪರದೇಶಿ, ಸಿರಿಗೆರೆಯ ನಾಗರಾಜ ಬಂಡಾ ಹಾಗೂ ಗ್ರಾಮದ ಪುಟ್ಟಯ್ಯ ಮಾಗೋಡ, ವೀರಭದ್ರಪ್ಪ ಬಳಲಕೊಪ್ಪ ಮಕ್ಕಳು ನಾಣ್ಯ, ಧಾನ್ಯ, ಬೆಲ್ಲ, ಸಕ್ಕರಿ, ಫಲಗಳ ಮೂಲಕ ತುಲಾಭಾರ ಮಾಡಿದರು.ವಯೋವೃದ್ಧ ರೈತ ಮಲ್ಲಪ್ಪ ವೀರಗೊಂಡ, ಶಂಕ್ರಪ್ಪ ದ್ಯಾಮಳ್ಳಿ, ನಿಂಗಪ್ಪ ಹೊಮ್ಮರಡಿ, ರಮೇಶರಾವ್ ಕಾಟೆ ಹಾಗೂ ಮಹದೇವಪ್ಪ ಶಿವಣ್ಣನವರ ರೈತರನ್ನು ಸಮಿತಿಯವರನ್ನು ಗೌರವಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ ಕಾಟೆ ಬಾಲ ಪ್ರತಿಭೆ ನಿಂಗರಾಜ ಬಸೇಗಣ್ಣಿ ಅವರಿಗೆ ಗೌರವ ಶ್ರೀರಕ್ಷೆ ನೀಡಲಾಯಿತು.ಗ್ರಾಮದ ಗಣ್ಯರಾದ ದೇವಪ್ಪ ಅಳ್ಳಳ್ಳಿ, ಈಶಪ್ಪ ಭೀಮಕ್ಕನವರ, ಶಿವಪ್ಪ ಜವಳಿ, ಚನ್ನವೀರ​‍್ಪ ಬಸೇಗಣ್ಣಿ, ಬಸವರಾಜ ಬಳಲಕೊಪ್ಪ, ಪ್ರಭಣ್ಣ ಪಟ್ಟಣಶೆಟ್ಟಿ, ದ್ಯಾಮಣ್ಣ ಬೆಳವಿಗಿ, ಬಸವಂತಪ್ಪ ಮುಗದೂರ, ಮೌಲಾಲಿ ಚೋಪದಾರ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಹುಲಿಗೆಮ್ಮದೇವಿ ದೇವಸ್ಥಾನದ ಹುಲಿಗೆಮ್ಮ ಈಳಗೇರ, ವೇಽಽ ಗದಗಯ್ಯ ಶಾಸಿೊಗಳು ಹಿರೇಮಠ ಹಾಗೂ ವೇಽಽ ಎಂ.ಪಿ.ಪ್ರಭುಸ್ವಾಮಿಮಠ ಉಪಸ್ಥಿತರಿದ್ದರು.ವಿವಿಧ ಭಾಗಗಳಿಂದ ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಚೈತನ್ಯ, ಪಲ್ಲವಿ ಜವಳಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಜಯಶ್ರೀ ಮಡಿವಾಳರ ಸ್ವಾಗತಿಸಿದರು. ಮಂಜುನಾಥ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಮಾತೆ ನೇತ್ರಾವತಿ ಕೊಪ್ಪಳದ ನಿರೂಪಿಸಿದರು. ಸಂಚಾಲಕ ರೇವಣೆಪ್ಪ ರಾಗಿಯವರ ವಂದಿಸಿದರು. ನಂತರ ಮಕ್ಕಳಿಂದ ನಡೆದ ನೃತ್ಯ ಪ್ರದರ್ಶನಗಳು ಗಮನಸೆಳೆದವು.