ಕೆಂಪೇಗೌಡರ ತತ್ವಾದರ್ಶಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕ: ಯಂಪೂರೆ

ಕೆಂಪೇಗೌಡರ ತತ್ವಾದರ್ಶಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕ: ಯಂಪೂರೆ  Life is meaningful if Kempegowda's philosophies are adopted: Yampure

ಸಿಂದಗಿ 28: ಮೊದಲನೆಯ ಕೆಂಪೇಗೌಡರು ಬೆಂಗಳೂರು ಮಾಗಡಿಯ ಸ್ಥಾಪಕರು ಹಿರಿಯ ಕೆಂಪೇಗೌಡರು 1510 ರಲ್ಲಿ ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ ಯಲಹಂಕದಲ್ಲಿ ಜನಿಸಿದ ಮೊದಲನೆಯ ಪುತ್ರ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿ 59 ವರ್ಷಗಳಲ್ಲಿ ಇತಿಹಾಸ ನಿರ್ಮಿಸಿ 1569 ರಲ್ಲಿ ತಮ್ಮ ಇಹಲೋಕವನ್ನು ತ್ಯಜಿಸಿದರು. ಇಂತವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಜೀವನ ಸಾರ್ಥಕವಾಗುತ್ತದೆ ಎಂದು ಪತ್ರಕರ್ತ ಪಂಡಿತ ಯಂಪೂರೆ ಹೇಳಿದರು. 

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳೀತವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ,  ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ ಇದನ್ನು ಬೆಂಗಳೂರು ಸಿಟಿ ಎಂದು ನಿರ್ಮಾಣ ಮಾಡುವಲ್ಲಿ ನಾಡಪ್ರಭೂ ಕೆಂಪೇಗೌಡರ ಪಾತ್ರ ಹಿರಿದ್ದಾಗಿದೆ ಎಂದರು. 

 ನಿವೃತ್ತ ಪ್ರಾಚಾರ್ಯ ಬಿ.ಎಂ.ಬಿರಾದಾರರು ಮಾತನಾಡಿ, 1509ರಲ್ಲಿ ವಿಜಯನಗರದ ಸಿಂಹಾಸನವೇರಿದ್ದ ಶ್ರೀಕೃಷ್ಣದೇವರಾಯರು ಹಲವಾರು ಯುದ್ಧಗಳಲ್ಲಿ ಜಯಗಳಿಸಿ ತಮ್ಮ ಸೈನ್ಯದ ಅಸಾಧಾರಣ ಸಾಮರ್ಥ್ಯ ಹಾಗೂ ವಿಜಯನಗರದ ಸಾಮ್ರಾಜ್ಯದ ವೈಭೋಗವನ್ನು ಅನಾವರಣ ಮಾಡಲೆಂದು 1515ರಲ್ಲಿ ರಾಜಧಾನಿ ಹಂಪಿಯಲ್ಲಿ ಪ್ರಥಮ ಬಾರಿಗೆ ವಿಜಯದಶಮಿ ಉತ್ಸವವನ್ನು ಆರಂಭಿಸಿದರು. ಈ ಅದ್ಭುತ ಸಮಾರಂಭಕ್ಕೆ ತಂದೆಯವರ ಜೊತೆ ಹೋಗಿದ್ದ ಬಾಲಕ ಕೆಂಪರಾಯನ ವಯಸ್ಸು ಆಗ ಐದು ವರ್ಷ ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ತಮ್ಮ ನಾಡಿನಲ್ಲೂ ಈ ಎಲ್ಲಾ ವೈಭವಗಳನ್ನು ಮರು ಪ್ರತಿಷ್ಠಾಪಿಸುವ ಬಯಕೆ ಮನೆ ಮಾಡಿತ್ತು. ಇದರಿಂದಾಗಿ ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳೆಲ್ಲವನ್ನೂ ಮನದಟ್ಟು ಮಾಡಿಕೊಂಡು ಬಂದಿದ್ದರು. 

ನಗರ ನಿರ್ಮಾಣಕ್ಕೆ ಸೂಕ್ತ ಜಾಗವನ್ನರಸುತ್ತಾ ಅಮಾತ್ಯ ವೀರಣ್ಣ ಹಾಗೂ ಕೆಲ ಸೈನಿಕರೊಂದಿಗೆ ಯಲಹಂಕದಿಂದ ದಕ್ಷಿಣಕ್ಕೆ ಹತ್ತು ಮೈಲು ದೂರ ದಾಟಿ ಎತ್ತರದ ಪ್ರದೇಶವೊಂದಕ್ಕೆ ಬರುವ ಕೆಂಪೇಗೌಡರಿಗೆ ಸಣ್ಣ-ಪುಟ್ಟ ತೊರೆಗಳಿಂದ ಕೂಡಿದ ಹಸಿರಿನಿಂದ ನಳನಳಿಸುತ್ತಿದ್ದ ಕಾಡು ಎದುರಾಗುತ್ತದೆ. ಕಾಡಿನ ನಡುವೆ ಸಾಗುತ್ತಿದ್ದಂತೆ ಒಂದು ವಿಸ್ಮಯಕಾರಿ ಘಟನೆ ಕೆಂಪೇಗೌಡರ ಎದುರಿನಲ್ಲೇ ನಡೆಯುತ್ತದೆ. ಪುಟ್ಟ ಮೊಲವೊಂದು ತನ್ನನ್ನು ತಿನ್ನಲೆಂದು ಬಂದ ಬೇಟೆ ನಾಯಿಯೊಂದನ್ನು ಓಡಿಸಿಕೊಂಡು ಹೋಗುತ್ತಿರುವುದು ಕೆಂಪೇಗೌಡರಿಗೆ ಕಂಡುಬರುತ್ತದೆ. ಇಲ್ಲಿರುವ ಸಾಮಾನ್ಯ ಮೊಲವೊಂದಕ್ಕೆ ಇಷ್ಟು ಧೈರ್ಯವಿರಬೇಕಾದರೆ ಇದು ಖಂಡಿತ ವೀರಭೂಮಿಯೇ ನಿಜ ಎನಿಸುತ್ತದೆ. ಹೀಗಾಗಿ ನಗರ ನಿರ್ಮಾಣಕ್ಕೆ ಇದೇ ಸೂಕ್ತವಾದ ಪ್ರದೇಶವೆಂದು ಕೆಂಪೇಗೌಡರು ಭಾವಿಸಿದರು ಎಂದು ತಿಳಿಸಿದರು. 

ಗ್ರೇಡ್ 2 ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ಶಿರಸ್ತೆದಾರ ಆರ್‌.ಪಿ.ಜ್ಯೋಶಿ,  ಸಿಬ್ಬಂದಿಗಳಾದ ಗಂಗಾಧರ ಸೋಮನಾಯಕ, ಗಗನ ಕುಲಕಣೀರ್, ಮಲ್ಲು ಮಾಲಗಾರ, ಸಾಗರ ಪಾಟೀಲ, ಕೀರ್ತಿ ಅಗ್ನಿಹೊತ್ರಿ, ವಿದ್ಯಾ ಹಿಪ್ಪರಗಿ, ಹೀನಾ ಸರಿನಾ ಮಂದೆವಾಲಿ, ವಿಜಯಲಕ್ಷ್ಮೀ, ಗುರುನಾಥ ರಡ್ಡಿ, ಸಂತೋಷ ವಾಲೀಕಾರ ಸೇರಿದಂತೆ ಹಲವರಿದ್ದರು.