ಕಲಿತ ವಿದ್ಯೆಯನ್ನು ಸಮಾಜಕ್ಕೆ ಹಂಚಿದಾಗ ಬದುಕು ಸಾರ್ಥಕ: ಮಾತೋಶ್ರೀ ವಿದ್ಯಾವತಿ
Life becomes meaningful when the knowledge one has acquired is shared with society: Matoshree Vidyav
ಲೋಕದರ್ಶನ ವರದಿ
ಮಹಾಲಿಂಗಪುರ, ಜು.11: ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಲು ಕೌಶಲ್ಯಾಭಿವೃದ್ಧಿ ಅತ್ಯಗತ್ಯವಾಗಿದ್ದು, ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಧಾರೆ ಎರೆದಾಗ ಮಾತ್ರ ಬದುಕಿಗೆ ನಿಜವಾದ ಅರ್ಥ ದೊರೆಯುತ್ತದೆ ಎಂದು ಮಾತೋಶ್ರೀ ವಿದ್ಯಾವತಿಯವರು ಹೇಳಿದರು.
ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಹುರಕಡ್ಲಿ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಮಹಿಳೆಯರ ಸ್ವ-ಉದ್ಯೋಗ ತರಬೇತಿ ಶಿಬಿರ ಹಾಗೂ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗದೆ ಸ್ವಂತ ಆದಾಯ ಗಳಿಸಿ ಆತ್ಮಗೌರವದಿಂದ ಬದುಕುವಂತಾಗಬೇಕು. ಅದಕ್ಕಾಗಿ ಇಂತಹ ತರಬೇತಿ ಶಿಬಿರಗಳು ಅತ್ಯಂತ ಅಗತ್ಯವಾಗಿದ್ದು, ಸಾವಿರಾರು ಮಹಿಳೆಯರ ಬದುಕಿಗೆ ಹೊಸ ದಿಕ್ಕು ತೋರಿಸುವ ಶಕ್ತಿಯನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಹೊಲಿಗೆ, ಆರಿ ಕಲೆ, ಕುಬಸದ ಕಲೆ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಕಲಿಸುವ ಮೂಲಕ ಮಹಿಳೆಯರಿಗೆ ಸ್ವ-ಉದ್ಯೋಗದ ದಾರಿ ತೋರಿಸುತ್ತಿರುವ ಹುರಕಡ್ಲಿ ಫೌಂಡೇಶನ್ ಕಾರ್ಯ ನಿಜಕ್ಕೂ ಮಾದರಿಯಾಗಿದೆ. ಸಂಸ್ಥೆಯ ಪ್ರಮುಖರಾದ ಚನಬಸು ಹುರಕಡ್ಲಿ ಹಾಗೂ ಸವಿತಾ ಹುರಕಡ್ಲಿ ಅವರು ಯಾವುದೇ ಪ್ರತಿಫಲದ ನೀರೀಕ್ಷೆಯಿಲ್ಲದೆ ಸಮಾಜಮುಖಿ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಹೇಳಿದರು.
ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತರಬೇತಿ ಶಿಬಿರದ ಜೊತೆಗೆ ಗರ್ಭಿಣಿಯರಿಗೆ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಭಾರತೀಯ ಸಂಸ್ಕೃತಿಯ ಮಹತ್ವವನ್ನು ಸಾರುವ ಕಾರ್ಯವಾಗಿದೆ. ನಮ್ಮ ಬದುಕಿನಲ್ಲಿ ಕೇವಲ ಕರ್ಮಪುತ್ರರಾಗದೆ ಧರ್ಮಪುತ್ರರಾಗಿ ಸಮಾಜಕ್ಕೆ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪರೋಪಕಾರಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುರಕಡ್ಲಿ ಫೌಂಡೇಶನ್ ಪ್ರಮುಖರಾದ ಸವಿತಾ ಹುರಕಡ್ಲಿ ಮಾತನಾಡಿ, ಮಹಿಳೆಯರು ಕುಟುಂಬದ ಶಕ್ತಿಯಾಗಿದ್ದು, ಅವರ ಆರ್ಥಿಕ ಸಬಲೀಕರಣವೇ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೆ ಮೂಲವಾಗಿದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಕಾಲಿನ ಮೇಲೆ ನಿಂತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯದಿಂದ ಫೌಂಡೇಶನ್ ನಿರಂತರವಾಗಿ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ಹೊಲಿಗೆ, ಆರಿ ಕಲೆ ಹಾಗೂ ಕುಬಸದ ಕಲೆಗಳಲ್ಲಿ ತರಬೇತಿ ಪಡೆಯುತ್ತಿದ್ದು, ತರಬೇತಿಯ ನಂತರ ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹಲವು ಗರ್ಭಿಣಿಯರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಕಾರ್ಯಕ್ರಮ ನಡೆಸಿ ಆಶೀರ್ವದಿಸಲಾಯಿತು.
ಶ್ರೀಶೈಲಪ್ಪಣ್ಣ ಉಳ್ಳೇಗಡ್ಡಿ, ಶ್ರೀಶೈಲಪ್ಪ ಹಿಪ್ಪರಗಿ, ಭೀಮಪ್ಪ ಪೂಜಾರಿ, ಮಹಾಲಿಂಗಪ್ಪ ಕಂಠಿ, ಪ್ರಕಾಶ ಬಾಡನವರ, ಸಂಜು ಬಾರುಕೋಲ, ಮಲ್ಲಪ್ಪ ತೇಲಿ, ಶ್ರೀಶೈಲ ಬಳಗಾರ, ಮಹಾದೇವಪ್ಪ ಟಿರಕಿ, ಮಲ್ಲಪ್ಪ ತೇರದಾಳ, ಸಹನಾ ಶಿರೋಳ, ಪಾತ್ರೋಟ, ಮಹೇಂದ್ರಕರ ಮೇಡಂ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಫೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ ಸ್ವಾಗತಿಸಿದರು. ಪ್ರೊ. ರವಿ ಕಲ್ಲೋಳ್ಳಿ ನಿರ್ವಹಿಸಿ ವಂದಿಸಿದರು. ಖ್ಯಾತ ಕಲಾವಿದ ಚನ್ನಪ್ಪ ಹುನ್ನೂರ ಅವರು ಕನ್ನಡದ ಹಳೆಯ ಚಲನಚಿತ್ರ ಗೀತೆಗಳನ್ನು ಸುಮಧುರವಾಗಿ ಹಾಡಿ ಸಭಿಕರನ್ನು ರಂಜಿಸಿದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 