ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಅಭಿಮತ ಹಿಂದೂ ಧರ್ಮ ಪುನರುಜ್ಜೀವನಗೊಳಿಸಿದ ಆಧ್ಯಾತ್ಮ ಆದಿ ಶಂಕರಾಚಾರ್ಯರು
Lidkar President Mundaragi Nagaraja believes that Adi Shankaracharya was the spiritual leader who re
ಲೋಕದರ್ಶನ ವರದಿ
ಬಳ್ಳಾರಿ 21 : ಹಿಂದೂ ಧರ್ಮ ಪುನರುಜ್ಜೀವನಗೊಳಿಸಿದ ಆಧ್ಯಾತ್ಮ ಆದಿ ಶಂಕರಾಚಾರ್ಯರು. ಸಮಾಜವನ್ನು ಸುಸ್ಥಿತಿಗೆ ಕೊಂಡೊಯ್ಯುವಲ್ಲಿ ಆದಿ ಶಂಕರಾಚಾರ್ಯರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಂಗನಕಲ್ಲು ರಸ್ತೆಯ ಭಾರತಿ ತೀರ್ಥ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಆದ್ಯ ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು (ದಕ್ಷಿಣದಲ್ಲಿ ಶೃಂಗೇರಿ, ಪಶ್ಚಿಮದಲ್ಲಿ ದ್ವಾರಕಾ, ಪೂರ್ವದಲ್ಲಿ ಪುರಿ ಜಗನ್ನಾಥ ಮತ್ತು ಉತ್ತರದಲ್ಲಿ ಬದರಿನಾಥ) ಸ್ಥಾಪಿಸುವ ಮೂಲಕ ವೇದಾಂತದ ಪುನರುಜ್ಜೀವನ ಮತ್ತು ಹಿಂದೂ ಧರ್ಮದ ಏಕತೆಯನ್ನು ಬಲಪಡಿಸಿದವರು ಎಂದು ತಿಳಿಸಿದರು.
2018 ರಲ್ಲಿ ಸ್ಥಾಪನೆಯಾದ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 2025-26 ನೇ ಸಾಲಿನಲ್ಲಿ ರಾಜ್ಯ ಸರ್ಕಾರ 60 ಕೋಟಿ ರೂ. ಅನುದಾನ ನೀಡಿದೆ. ಸಮುದಾಯದ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 20 ರಿಂದ 30 ಕೋಟಿ ರೂ. ಮೀಸಲಿಡಲಾಗಿದ್ದು, ಇದರಲ್ಲಿ ಶೇ. 50 ರಷ್ಟು ಸಬ್ಸಿಡಿ ದೊರೆಯಲಿದೆ. ಬಡ ಬ್ರಾಹ್ಮಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 10 ರಿಂದ 15 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ತುರ್ತು ವೈದ್ಯಕೀಯ ನೆರವಿಗೆ 3 ರಿಂದ 5 ಕೋಟಿ ರೂ. ಹಾಗೂ ಮಹಿಳಾ ಉದ್ಯಮಿಗಳಿಗೆ ನೆರವಾಗಲು 5 ರಿಂದ 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಮಾನವನಲ್ಲಿ ದೇವರನ್ನು ಕಾಣುವುದೇ ಕಷ್ಟವಿರುವ ಕಾಲದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಆತ್ಮದಲ್ಲೂ ಪರಮಾತ್ಮನಿದ್ದಾನೆ ಎಂದು ಸಾರಿದ ಆದಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಜಗತ್ತಿಗೆ ಶ್ರೇಷ್ಠ ಕೊಡುಗೆಯಾಗಿದೆ ಎಂದು ಹೇಳಿದರು.
ಮನುಷ್ಯ ಬದುಕಿರುವಾಗಲೇ ಸತ್ಸಂಗ ಮತ್ತು ನಿಸ್ಸಂಗದ ಮೂಲಕ ಮೋಹವನ್ನು ತೊರೆದು ಜೀವನ ಮುಕ್ತಿಯನ್ನು ಪಡೆಯಬಹುದು ಎಂದು ಎಂಟನೇ ಶತಮಾನದಲ್ಲೇ ಸಾರಿದ ಮಹಾನ್ ವ್ಯಕ್ತಿ ಶಂಕರಾಚಾರ್ಯರು. ಕರ್ನಾಟಕದ ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸುವ ಮೂಲಕ ಅಧ್ಯಾತ್ಮದ ತಳಹದಿಯನ್ನು ಬಲಪಡಿಸಿದರು. ಬ್ರಾಹ್ಮಣ ಸಮುದಾಯವು ನಾಡು-ನುಡಿ ಮತ್ತು ದೇಶ ಕಟ್ಟುವಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಅವರು ಶ್ಲಾಘಿಸಿದರು.
ಸರ್ ಎಂ.ವಿಶ್ವೇಶ್ವರಯ್ಯನವರು ತುಂಗಭದ್ರಾ ಅಣೆಕಟ್ಟು ಕಟ್ಟಿದರೆ, ಬ್ರಾಹ್ಮಣ ಸಮುದಾಯದ ಮೇಧಾವಿ ಇಂಜಿನಿಯರ್ ತಿರುಮಲೆ ಅಯ್ಯಂಗಾರ್ ಅವರು ಸ್ವಾತಂತ್ರ್ಯ ಬಂದ ಕೇವಲ ಮೂರು ವರ್ಷಗಳಲ್ಲಿ ಆ ಬೃಹತ್ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಿ ಈ ಭಾಗದ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರು. ಸಮಾಜಕ್ಕೆ ಉತ್ತಮ ಸಂಸ್ಕಾರ ಕಲಿಸುವಲ್ಲಿ ಮತ್ತು ಭಾರತವನ್ನು ಶಕ್ತಿಯುತ ರಾಷ್ಟ್ರವನ್ನಾಗಿ ಮಾಡುವಲ್ಲಿ ಈ ಸಮುದಾಯ ಯಾವಾಗಲೂ ಮುಂಚೂಣಿಯಲ್ಲಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸತತ ಎರಡನೇ ವರ್ಷ ಶಂಕರಾಚಾರ್ಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಎಲ್ಲಾ ಧರ್ಮ ಮತ್ತು ಜಾತಿಗಳನ್ನು ಸಮಾನವಾಗಿ ಪ್ರೀತಿಸುತ್ತದೆ ಎಂಬುದಕ್ಕೆ ಇಂತಹ ಜಯಂತಿಗಳ ಆಚರಣೆಯೇ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು.
ಬಳ್ಳಾರಿಯ ರಾಮಕೃಷ್ಣ ಆಶ್ರಮದ ಪೂಜ್ಯಶ್ರೀ ಸ್ವಾಮಿ ಮಂಗಳನಾಥಾನಂದಜಿ ಮಹಾರಾಜ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕ್ರಿಸ್ತ ಶಕ 788 ರ ಸುಮಾರಿಗೆ ಕೇರಳದ ಕಾಲಡಿಯಲ್ಲಿ ಶಿವಗುರು ಮತ್ತು ಆಯಾಂರ್ಬ ದಂಪತಿಗಳ ಪುತ್ರರಾಗಿ ಜನಿಸಿದ ಶಂಕರಾಚಾರ್ಯರು, ಬಾಲ್ಯದಲ್ಲೇ ಮೇಧಾವಿಗಳಾಗಿದ್ದರು. ಎಂಟನೇ ವಯಸ್ಸಿಗೆ ವೇದಗಳನ್ನು ಅಭ್ಯಾಸ ಮಾಡಿ ತಾಯಿಯ ಅನುಮತಿಯೊಂದಿಗೆ ಸನ್ಯಾಸ ಸ್ವೀಕರಿಸಿದರು. ಭಜಗೋವಿಂದಂ, ವಿವೇಕ ಚೂಡಾಮಣಿ ಸೇರಿದಂತೆ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮುದಾಯದವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಬಳ್ಳಾರಿಯ ಕೆ.ಶಾಂತಶಾಸ್ತ್ರಿ ತಂಡದಿಂದ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು.
ಈ ವೇಳೆ ಬಳ್ಳಾರಿಯ ಸಭಾಪತಿ ಬೀದಿಯ ಶ್ರೀ ಶೃಂಗೇರಿ ಶಂಕರಮಠದ ಮಠಾಧಿಕಾರಿ ಕೆ.ರವಿಶಾಸ್ತ್ರಿ, ಮಹಾನಗರ ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು ಹಾಗೂ ಮತ್ತೀತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 