ಭಾರತದ ಪ್ರಾಚೀನ ಜ್ಞಾನದ ಬಗ್ಗೆ ಹೆಮ್ಮೆ ಮೂಡಲಿ: ಗೋಖಲೆ

Let us be proud of India's ancient knowledge: Gokhale

ಭಾರತದ ಪ್ರಾಚೀನ ಜ್ಞಾನದ ಬಗ್ಗೆ ಹೆಮ್ಮೆ ಮೂಡಲಿ:  ಗೋಖಲೆ 

ಬೆಳಗಾವಿ 22: ಪ್ರಾಚೀನ ಕಾಲದಲ್ಲಿ ಭಾರತದ ಋಷಿಮುನಿಗಳು ಗಣಿತ, ಭೌತಶಾಸ್ತ್ರ, ರಸಾಯನ ಮತ್ತು ಖಗೋಳ ಶಾಸ್ತ್ರದ ಬಗ್ಗೆ ಬಹಳಷ್ಟು ಜ್ಞಾನವನ್ನು ಜಗತ್ತಿಗೆ ನೀಡಿದ್ದಾರೆ. ಆದ್ದರಿಂದ ಭಾರತದ ಪ್ರಾಚೀನ ಇತಿಹಾಸ ಮತ್ತು ಜ್ಞಾನದ ಬಗ್ಗೆ ಎಲ್ಲರಿಗೂ ಹೆಮ್ಮೆ ಇರಬೇಕು ಎಂದು ಅಂಕಣಕಾರ ಆದರ್ಶ ಗೋಖಲೆ ಹೇಳಿದರು.  ಕೆಎಲ್‌ಇ ಕಂಕಣವಾಡಿ ಆಯುರ್ವೇದ ಕಾಲೇಜು ಮತ್ತು ಸ್ವದೇಶಿ ಜಾಗರಣಾ ಮಂಚ ಬೆಳಗಾವಿ ಘಟಕದ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯತೆ ಮತ್ತು ಸ್ವದೇಶಿ ಜೀವನಶೈಲಿ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಭಗವತ್‌ಗೀತೆ, ವೇದ ಉಪನಿಷತ್ ಈ ಎಲ್ಲವು ಆಧುನಿಕ ವಿಜ್ಞಾನದ ಅಂಶಗಳನ್ನು ಒಳಗೊಂಡಿವೆ. ಅನೇಕ ವಿಜ್ಞಾನಿಗಳು ವೇದ, ರಾಮಾಯಣ ಭಗವತ್‌ಗೀತೆಯ ಶ್ಲೋಕದಲ್ಲಿ ಅಡಕವಾಗಿರುವ ಸಂಗತಿಗಳನ್ನು ಅರ್ಥೈಸಿಕೊಂಡು ಹೊಸ ಹೊಸ ಸಂಶೋಧನೆಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಓಲಪಿಂಕ್ಸ್‌ನಲ್ಲಿ ಪದಕ ಗೆಲ್ಲಲು ಭಗವತ್‌ಗೀತೆಯಿಂದ ಪಠಣದ ಮೂಲಕ ಏಕಾಗ್ರತೆ ವೃದ್ಧಿಯಾದ ಕಾರಣ ಓಲಪಿಂಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಮನು ಬಾಕರ್ ಹೇಳಿದ್ದಾರೆ. ಈ ಎಲ್ಲ ಸಂಗತಿಗಳು ಪ್ರಾಚೀನ ಭಾರತದ ಜ್ಞಾನದ ಶ್ರೇಷ್ಠತೆಗೆ ಸಾಕ್ಷಿಯಾಗಿವೆ ಎಂದರು.  ಭಾರತೀಯ ಗುರುಕುಲ ಶಿಕ್ಷಣ ಪದ್ಧತಿಯು ಮೌಲ್ಯ ಮತ್ತು ಸಂಸ್ಕಾರದ ಜೊತೆಗೆ ಪರೋಪಕಾರ, ಕಲೆ, ಆಧ್ಯಾತ್ಮ ಮತ್ತು ರಾಷ್ಟ್ರಭಕ್ತಿಯನ್ನು ಬೋಧಿಸಲಾಗುತ್ತಿತ್ತು. ಆ ಪರಿಣಾಮ ಭಾರತ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಎಂದು ಹೆಸರುವಾಸಿಯಾಗಿತ್ತು. ಆದರೆ ಕಳೆದ 200 ವರ್ಷಗಳಿಂದ ಬ್ರಿಟಿಷರು ಪರಿಚಯಿಸಿದ ಆಧುನಿಕ ಶಿಕ್ಷಣ ಪದ್ಧತಿಯು ಭಾರತಿಯರನ್ನು ಕಪ್ಪು ಬಣ್ಣದ ಪಾಶ್ಚಾತ್ಯರನ್ನಾಗಿ ರೂಪಿಸುವುದರ ಮೂಲಕ ಸಂಸ್ಕಾರ ಮತ್ತು ರಾಷ್ಟ್ರಭಕ್ತಿ ರಹಿತ ನಾಗರಿಕರ ರೂಪಿಸುವುದನ್ನು ಕಾಣುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.  ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಚಾರ್ಯ ಡಾ. ಪಿ. ಜಿ ಜಾಡರ್ ಮಾತನಾಡಿ, ಭಾರತದ ಪ್ರಾಚೀನ ಜ್ಞಾನ ಕುರಿತಾಗಿ ಅನೇಕ ಸಂಶೋಧನೆ ನಡೆಯುವ ಅವಶ್ಯಕತೆಯಿದೆ. ಇದರಿಂದ ಪ್ರಾಚೀಪ ಪರಂಪರೆ, ಜ್ಞಾನ ಇವೆಲ್ಲದರ ಬಗ್ಗೆ ತಿಳಿವಳಿಕೆ ಹೆಚ್ಚುವುದು ಎಂದರು.  ಕಾಲೇಜಿನ ಬೋಧಕ, ಬೋಧಕೇತರ, ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಡಾ. ಪ್ರವೀಣ ಬಿರಡಿ ಸ್ವಾಗತಿಸಿದರು. ಡಾ. ರಾಜಯ ಗೋವೆಕರ್ ನಿರೂಪಿಸಿದರು. ಡಾ. ಧವಲ ರಾಮವತ್ ವಂದಿಸಿದರು.