ಬೆಂಗಳೂರು, ಅ 03: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಭೀಕರ ಪ್ರವಾಹದಿಂದ ಅಪಾರ ನಷ್ಟ ಹಾಗೂ ಪ್ರಾಣಹಾನಿಯಾಗಿದ್ದು, ಕೇಂದ್ರ ಸರ್ಕಾರ ಇನ್ನೂ ಪರಿಹಾರ ಧನ ಬಿಡುಗಡೆಗೊಳಿಸಿಲ್ಲ. ಇದೇ ವೇಳೆ ಪರಿಹಾರ ಧನ ನೀಡುವುದಾದಲ್ಲಿ ಅದು ನೇರವಾಗಿ ಸಂತ್ರಸ್ತರಿಗೆ ತಲುಪಲಿ ಎಂದು ನಟ ಜಗ್ಗೆಶ್ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸದಲ್ಲಿದ್ದ ಕಾರಣ ಪರಿಹಾರ ಧನ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಇನ್ನು ಎರಡು ಮೂರು ದಿನಗಳಲ್ಲಿ ಈ ಕುರಿತು ಪ್ರಧಾನಿ ನಿರ್ಧರಿಸಲಿದ್ದಾರೆ. ರಾಜ್ಯದ ಪ್ರವಾಹದ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಪೂರ್ಣ ಮಾಹಿತಿಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆಯಷ್ಟೇ ತಿಳಿಸಿದ್ದಾರೆ ಕೇಂದ್ರ ಸಚಿವರಾದ ಡಿ.ವಿ ಸದಾನದಂದಗೌಡ ಅವರು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರೊಡಗೂಡಿ ಸಂಪುಟ ಸಭೆಯಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಟ ಜಗ್ಗೇಶ್ ಯಾವುದೇ ಪರಿಹಾರ ಸರ್ಕಾರದಿಂದ ಬಿಡುಗಡೆ ಆದರೆ ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ವರ್ಗವಾಗಲಿ!ಸಂತ್ರಸ್ತರ ಯವುದೇ ಪರಿಹಾರ ಬಂದರೂ ನುಂಗಲು ಮಧ್ಯವರ್ತ್ಗಳು ಹಸಿದ ತೋಳದಂತೆ ಕಾಯುತ್ತಿದ್ದಾರೆ!ಎಚ್ಚರವಾಗಿರಿ ಅಮಾಯಕರೆ!ಅರಿವಿಗಾಗಿ ತಾಲೂಕಿನ ದಂಡಾಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ! ಎಂದು ಟ್ವಿಟರ್ ಮೂಲಕ ನೊಂದವರಿಗೆ ಸಂದೇಶ ರವಾನಿಸಿದ್ದಾರೆ. ಸಾಕಷ್ಟು ಜನರು, ಇದೊಂದು ಉತ್ತಮ ಸಲಹೆ ಎಂದು ಜಗ್ಗೇಶ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ. ಪರಿಹಾರ ಧನ ಬಿಡುಗಡೆಯ ಬಗ್ಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಇಷ್ಟು ವಿಳಂಬವೇಕೆ ಎಂದು ವಿಪಕ್ಷಗಳು ಟೀಕಿಸುತ್ತಿದ್ದರೆ, ಬಿಜೆಪಿಯ ಮುಖಂಡರು ಒಂದೊಂದು ಬಗೆಯಲ್ಲಿ ಹೇಳಿಕೆ ನೀಡುತ್ತ, ಟೀಕೆಗೆ ಗುರಿಯಾಗುತ್ತಿದ್ದಾರೆ.