ಬೆಳಗಾವಿ 09 : ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳಿಗೆ ಸರ್ಕಾರ ಸಮರ್ಕ ಉತ್ತರ ನೀಡುತ್ತದೆ. ಬಿಜೆಪಿಯವರಿಗೆ ನಾವು ಸದನದಲ್ಲಿ ಮಾತನಾಡಲು ಹೆಚ್ಚು ಅವಕಾಶ ನೀಡಿದ್ದೇವೆ. ಬಿಜೆಪಿ ನಾಯಕರು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಆಸಕ್ತಿ ತೋರಿಸಲಿ ಎಂದು ಸದನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯ ವಿಚಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಅವರು ಮೂರು, ಐದು ಟೀಂಗಳಾದರೂ ಅದು ಅವರ ಪಕ್ಷದ ಆಂತರಿಕ ವಿಚಾರ. ಉತ್ತರ ಕರ್ನಾಟಕದ ವಿಚಾರದಲ್ಲಿ ಬಿಜೆಪಿಯವರು ಆಸಕ್ತಿ ತೋರಿಸಲಿ. ಅಭಿವೃದ್ಧಿ ಬಿಟ್ಟು ಬಿಜೆಪಿಯವರು ಕೇವಲ ವಿವಾದಾತ್ಮಕ ಹಾಗೂ ರಾಜಕೀಯ ವಿಷಯಗಳ ಕುರಿತು ಚರ್ಚೆಗೆ ಹೋಗ್ತಾರೆ. ವಿಪಕ್ಷಗಳು ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಬರಲಿ, ನಮ್ಮ ಸರ್ಕಾರ ಸಿದ್ದವಾಗಿದೆ ಎಂದರು.
ಅಂಬೇಡ್ಕರ್ ಸೇವಾ ಕೇಂದ್ರ ನೂತನ ಕಾರ್ಯಕ್ರಮದ ಮೂಲಕ 43 ಭಾಗಗಳಲ್ಲಿ 43 ವಾಹನಗಳು ಸಂಚರಿಸಲಿವೆ. ಇಲಾಖೆಯ ಪ್ರತಿನಿಧಿಗಳು ನಮ್ಮ ಇಲಾಖೆಯಿಂದ ಲಾಭ ಪಡೆದ ಫಲಾನುಭವಿಗಳನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಲಿದ್ದಾರೆ. ಇದರಿಂದ ನಕಲಿ ಕಾರ್ಮಿಕ ಕಾರ್ಡ್‌ಗಳ ಪತ್ತೆ ಹಚ್ಚಿ ಅವುಗಳ ರದ್ದತಿಗೆ ಸಹಕಾರವಾಗಲಿದೆ. ಬಡಿದಾಟ, ಹೊಡೆದಾಟ ಇಂಥವುಗಳಿಗೆ ನಾವು ಉತ್ತರ ಕೊಡುವುದಿಲ್ಲ. ಯಾವುದೇ ಸರ್ಕಾರಗಳು ಬಂದರೂ ಹೋರಾಟಗಳು ನಡೆಯುತ್ತವೆ, ಅದುವೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ತೀಲೀಸಿದರು.