ಬೆಂಗಳೂರು, ನ. 4: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡು ತಲೆಯ ಹಾವಿದ್ದಂತೆ. ಸುಪ್ರೀಂಕೋರ್ಟ್ ಅನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಡಿಯೂರು ಸಿದ್ದಲಿಂಗೇಶ್ವರ ಯಡಿಯೂರಪ್ಪನವರ ಆರಾಧ್ಯ ದೈವವಾಗಿದ್ದು, ದೈವದ ಮುಂದೆ ಆಡಿಯೋ ತಮ್ಮದಲ್ಲ ಎಂದು ಪ್ರಮಾಣ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ. ಯಡಿಯೂರಪ್ಪ ಆಡಿಯೋ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ. ಆಡಿಯೋ ವಿಚಾರದ ಬಗ್ಗೆ ಇವರು ಹತಾಶರಾಗಿ ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ಕೊಡುವುದನ್ನು ನೋಡಿದರೆ ಬುದ್ಧಿ ಕಳೆದುಕೊಂಡಂತಿದೆ. ಯಡಿಯೂರಪ್ಪರಿಂದ ಹಿಡಿದು ಬಿಜೆಪಿ ಎಲ್ಲಾ ನಾಯಕರಿಗೂ ಸಾಮೂಹಿಕ ಸನ್ನಿ ಹಿಡಿದಿದ್ದು, ಕಾಂಗ್ರೆಸ್ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಆಪರೇಷನ್ ಕಮಲದ ಕುರಿತು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋದ ಬಗ್ಗೆ ಬಿಜೆಪಿಯ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಅವರಿಗೆ ನಿಮ್ಹಾನ್ಸ್ ವೈದ್ಯರಿಂದ ಮಾನಸಿಕ ರೋಗಕ್ಕೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವ್ಯಂಗ್ಯವಾಡಿದರು. ಆಪರೇಷನ್ ಕಮಲದ ಬಗ್ಗೆ ಯಡಿಯೂರಪ್ಪ ಅವರೇ ಒಪ್ಪಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಣತಿಯಂತೆ ನಡೆದಿರುವುದನ್ನು ಯಡಿಯೂರಪ್ಪ ಸಭೆಯಲ್ಲಿ ಒಪ್ಪಿಕೊಂಡು ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಉಡಾಫೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನರ್ಹರನ್ನು ರಕ್ಷಣೆ ಮಾಡಬೇಕು ಎಂದು ಹೇಳಿದ್ದ ಅವರು ಕಾಂಗ್ರೆಸ್ ಸುಪ್ರೀಂ ಕೋರ್ಟ್ಗೆ ಆಡಿಯೋ ಸಲ್ಲಿಸಿದ ಮೇಲೆ ಆಡಿಯೋಗೂ ತಮಗೂ ಸಂಬಂಧವಿಲ್ಲ. ಅನರ್ಹರ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ಇದನ್ನು ನೋಡಿದರೆ ಯಡಿಯೂರಪ್ಪನವರ ಮನಸ್ಥಿತಿ ಏನಾಗಿದೆ ಎಂದು ಅರ್ಥಿಸಬಹುದು ಎಂದರು. ನಿಮಗೆ ತಾಕತ್ತಿದ್ದರೆ ಆಡಿಯೋದಲ್ಲಿ ಮಾತನಾಡಿರುವುದು ಯಾರು? ರಾಷ್ಟ್ರಾಧ್ಯಕ್ಷರ ಬಗ್ಗೆ ನೀವು ಮಾತನಾಡಿಲ್ಲವೇ ?ನಿಮ್ಮ ಕಾರ್ಯಕರ್ತರು ಆಡಿಯೋ ಮಾಡಿ ಬಿಟ್ಟಿಲ್ಲವೇ? ಎಂಬುದಕ್ಕೆ ಮೊದಲು ಉತ್ತರ ನೀಡಿ ಎಂದು ಉಗ್ರಪ್ಪ ಹೇಳಿದರು. ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಗುಂಪುಗಾರಿಕೆ ನಡೆಯುತ್ತಿದೆ. ಅವರನ್ನು ಪದವಿಯಿಂದ ಇಳಿಸಲು ಹುನ್ನಾರ ನಡೆದಿದೆ. ಆರ್.ಎಸ್.ಎಸ್ ನ ಬಿ.ಎಲ್. ಸಂತೋಷ್ ಸೇರಿದಂತೆ ಹಲವರು ಚಿತಾವಣೆ ಮಾಡುತ್ತಿದ್ದಾರೆ. ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿಯವರೇ ಯಡಿಯೂರಪ್ಪ ಅವರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಹಿಂದೆ ಅವರನ್ನು ಹುದ್ದೆಯಿಂದ ಇಳಿಸಿದವರೇ ಈಗಲೂ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.