ವೇಮನರ ತತ್ವ ಸಿದ್ಧಾಂತಗಳು ಇನ್ನಷ್ಟು ಪಸರಿಸಿ ಜಾಗೃತಿ ಮೂಡಲಿ : ಡಾ. ಎಚ್‌.ಕೆ. ಪಾಟೀಲ

ವೇಮನರ ತತ್ವ ಸಿದ್ಧಾಂತಗಳು ಇನ್ನಷ್ಟು ಪಸರಿಸಿ ಜಾಗೃತಿ ಮೂಡಲಿ : ಡಾ. ಎಚ್‌.ಕೆ. ಪಾಟೀಲ Let Vemana's philosophies spread further and create awareness: Dr. H.K. Patil



ಗದಗ  19 :  ಮಹಾಯೋಗಿ ವೇಮನರ ತತ್ವ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ. ಅವುಗಳನ್ನು ಇನ್ನಷ್ಟು ಪಸರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲರು ಹೇಳಿದರು. ನಗರದ ಕೆ.ಎಚ್‌. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ಮತ್ತು ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಅನ್ಯಾಯದ ವಿರುದ್ಧ ಹೋರಾಡುವ ಸ್ವಭಾವದ ಸಮಾಜ ನಮ್ಮದು. ವಡ್ಡರಿಗೆ ಗುಡ್ಡ, ರೆಡ್ಡರಿಗೆ ಹೊಲ ತೊರಿಸಬಾರದು  ಎಂಬ ಗಾದೆಯಂತೆ ಶ್ರಮಜೀವಿಗಳು ರೆಡ್ಡಿ ಸಮುದಾಯದವರು. ಭೂಮಿಯ ಮೇಲೆ ಅಪಾರ ಮೋಹ ಇಟ್ಟುಕೊಂಡು ಪ್ರಾಮಾಣಿಕವಾಗಿ ದುಡಿದು ಬದುಕುವವರು ನಮ್ಮವರು ಎಂದು ಹೇಳಿದರು. ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿರುವ ರೆಡ್ಡಿ ಸಮಾಜ ಶ್ರೇಷ್ಠ ಸಮಾಜವಾಗಿದೆ. ಜನರ ಪ್ರೀತಿಗೆ ಪಾತ್ರರಾದ ರೆಡ್ಡಿ ಸಮುದಾಯದವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರಂತಹ ಮಹಾನ್ ವ್ಯಕ್ತಿತ್ವಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು. ಸಾರಸ್ವತ ಲೋಕಕ್ಕೆ ವೇಮನರ ವಿಚಾರಧಾರೆಯನ್ನು ಪರಿಚಯಿಸುವ ಉದ್ದೇಶದಿಂದ ವೇಮನರ ಕುರಿತು ಪುಸ್ತಕಗಳನ್ನು ಲೋಕಾರೆ​‍್ಣ ಮಾಡಲಾಗಿದೆ. ಮುಂದಿನ 15 ದಿನಗಳೊಳಗೆ ರೆಡ್ಡಿ ಸಮಾಜದ ಸಮುದಾಯ ಭವನಕ್ಕೆ ಜಾಗ ದೊರೆಯಲಿದೆ. ಮುಂದಿನ ವರ್ಷ ಅಲ್ಲಿಯೇ ಮಹಾಯೋಗಿ ವೇಮನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹೇಳಿದರು. 

ಎಲ್ಲ ಜಯಂತಿಗಳು ದೊಡ್ಡ ಪ್ರಮಾಣದಲ್ಲಿ ಹಾಗೂ ಅರ್ಥಪೂರ್ಣವಾಗಿ ಜರುಗಬೇಕು. ಕನ್ನಡ ನಾಡಿಗೆ ಮಹಾಯೋಗಿ ವೇಮನರನ್ನು ಪರಿಚಯಿಸಿದವರು ಎಸ್‌.ಆರ್‌. ಪಾಟೀಲರು ಎಂಬುದನ್ನು ನಾವೆಲ್ಲರೂ ಅರಿಯಬೇಕು. ಬಾಯಿಂದ ಬಾಯಿಗೆ ಹರಿದಾಡುತ್ತಿದ್ದ ವೇಮನರ ಸಾಹಿತ್ಯವನ್ನು ಸಿ.ಪಿ. ಬ್ರೌನ್ ಅವರು ಆಂಗ್ಲ ಭಾಷೆಗೆ ಅನುವಾದಿಸಿ ವಿಶ್ವಕ್ಕೆ ಪರಿಚಯಿಸಿದ್ದಾರೆ. ವೇಮನರ 20 ಸಾವಿರಕ್ಕೂ ಅಧಿಕ ಪ್ರತಿಗಳನ್ನು ಮುದ್ರಿಸಿ ಹಂಚಿಕೆ ಮಾಡಲಾಗಿದೆ ಎಂಬುದು ಸಂತಸದ ಸಂಗತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇಮನ ಪೀಠ ಸ್ಥಾಪನೆಯಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು. ಮಹಾಯೋಗಿ ವೇಮನರ ತತ್ವಸಿದ್ಧಾಂತಗಳು ಇಂದಿಗೂ ಹೆಚ್ಚು ಪ್ರಸ್ತುತವಾಗಿವೆ. ಅವುಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್‌.ವಿ. ಸಂಕನೂರ ಮಾತನಾಡಿ, ತಮಗಾಗಿ ಬದುಕದೇ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ನಾವು ಆಚರಿಸುತ್ತೇವೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಮಹಾಯೋಗಿ ವೇಮನರು ಒಬ್ಬರು ಎಂದರು. 

ವೇಮನರು ಸಾಕಷ್ಟು ಕವನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಕವನಗಳು ಸರಿಯಾಗಿ ದಾಖಲಿಕರಣವಾಗಿರಲಿಲ್ಲ. ಅನೇಕ ಕವನಗಳು ತಾಳೆಗರಿಗಳಲ್ಲಿ ಇದ್ದು, ಅವುಗಳನ್ನು ಸಂರಕ್ಷಿಸಲು ಬ್ರಿಟಿಷ್ ಸರ್ಕಾರವೇ ಮುಂದಾಯಿತು ಎಂದರೆ ವೇಮನರ ಕವಿತೆಗಳ ಶಕ್ತಿ ಎಷ್ಟಿತ್ತು ಎಂಬುದನ್ನು ಅರಿಯಬಹುದು. ಈ ಶತಮಾನ ಜ್ಞಾನದ ಯುಗ, ಪಾಂಡಿತ್ಯದ ಯುಗ. ಸಮಾಜದ ಎಲ್ಲ ಮಕ್ಕಳಿಗೂ ಸಮರ​‍್ಕ ಜ್ಞಾನ ಹಾಗೂ ಶಿಕ್ಷಣ ನೀಡಬೇಕು ಎಂದು ಹೇಳಿದರು. ತಮ್ಮ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಆರ್‌. ಯಾವಗಲ್ ಮಾತನಾಡಿ ಮಹಾಯೋಗಿ ವೇಮನ ವಿಚಾರಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ.  ಇಡೀ ಮನುಕುಲಕ್ಕೆ ಸಾರ್ವಕಾಲಿಕವಾಗಿವೆ.  ವೇಮನರು ತಮ್ಮ ವಚನಗಳ ಮೂಲಕ  ದೇಶಕ್ಕೆ  ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಹಾಯೋಗಿ ವೇಮನರ ಜಯಂತಿ ಆಚರಣೆಯ ಮೂಲಕ ವೇಮನರ  ವಿಚಾರಗಳನ್ನು  ಸಮಾಜದ ಒಳಿತಿಗಾಗಿ ಪಸರಿಸಲು ಎಲ್ಲರೂ ಸಂಘಟಿತರಾಗಬೇಕು ಎಂದರು.   

ಹುಲಕೋಟಿಯ ಶ್ರೀ ರಾಜರಾಜೇಶ್ವರಿ ವಿದ್ಯಾನಿಕೇತನದ ಅನಿಲ ವೈದ್ಯ ಅವರು ಉಪನ್ಯಾಸ ನೀಡುತ್ತಾ ಮಾತನಾಡಿ ವೇಮನರ ವಚನಗಳ ಪೂಜೆಯಾಗಬೇಕು. ಮಾನವ ಮಹಾಮಾನವ ಆಗಬೇಕು. ಪೂಜೆಯೆನ್ನುವುದು ಸಂಸ್ಕಾರವಾಗಬೇಕು. ಸಂಸ್ಕಾರವು ಸಾಕ್ಷಾತ್ಕಾರವಾಗಬೇಕು. ವೇಮನರು ಮೋಹಕ್ಕೆ ಬಿದ್ದು ಅದರಿಂದ ಹೊರಬರುತ್ತಾರೆ.  ಮಹಾಯೋಗಿ ವೇಮನರು ತಮ್ಮ ವಚನಗಳಲ್ಲಿ  ನಿಜವನರಿತವನು ನೀತಿವಂತನು ಎಂದು ಹೇಳಿದ್ದಾರೆ. ಅಜ್ಞಾನದಲ್ಲಿರುವ ತನಕ ಸುಜ್ಞಾನ ಸಿಗುವುದಿಲ್ಲ. ಆಸೆಗಳನ್ನು ತ್ಯಜಿಸಿ ಸತ್ಯವನರಿತು ನಿಜಮಾನವರಾಗಬೇಕು. ಸತ್ಯದ ಅಂಶವನ್ನು ಹೊರತೆಗೆದು ಕಂದಾಚಾರಗಳನ್ನು ಟೀಕೆ ಮಾಡಿ  ಸಮಾಜದ ಸುಧಾರಣೆ ಮಾಡಿದರು.  ವೇಮನರು ವಿಶ್ವಮಾನವರಾಗಿ ಧರ್ಮ ಜಾಗೃತಿ ಮಾಡಿದರು. ವೇಮನರ ಚರಿತ್ರೆಗಳನ್ನು ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪಸರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ.  ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ಕ್ರಿ.ಶ. 1985 ರಲ್ಲಿ ಧಾರವಾಡದಲ್ಲಿ ವೇಮನ ವಿದ್ಯಾಪೀಠ ಸ್ಥಾಪನೆಯಾಯಿತು. ಅದರ ನಿಮಿತ್ತ ಜಯಂತಿ ಕಾರ್ಯಕ್ರಮದಲ್ಲಿ ವೇಮನರ ಕುರಿತು ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ,  ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ,  ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾದಿಕಾರದ ಅಧ್ಯಕ್ಷ ಅಶೋಕಮಂದಾಲಿ, ಕೃಷ್ಣಗೌಡ ಪಾಟೀಲ, ಎಚ್‌.ಎಸ್‌.ಶಿವನಗೌಡ್ರ, ವಾಸಣ್ಣ ಕುರಡಗಿ,  ಶ್ರೀನಿವಾಸ ದ್ಯಾವನಗೌಡ್ರ,  ಮುಚ್ಚಂಡಿ,  ಆರ್‌.ಎಸ್‌.ಪಾಟೀಲ, ಕರಬಸಪ್ಪ ಹಂಚಿನಾಳ, ಲಕ್ಷಣಗೌಡ ಪಾಟೀಲ, ತಮ್ಮನಗೌಡ ಶಿರಿಯಪ್ಪಗೌಡ್ರ, ಶೇಖರಡ್ಡಿ ಎಫ್ ಗದ್ದಿಕೇರಿ, ಶಿವನಗೌಡ ರಾ. ಹಳ್ಳೂರ, ಶ್ರೀಮತಿ ಜಯಶ್ರೀ ಚ ಕೋಲಕಾರ, ರವಿಂದ್ರನಾಥ ಕುಲಕರ್ಣಿ, ಜೆ.ಕೆ.ಜಮಾದಾರ, ಜಿ.ಬಿ.ಆದಾಪೂರ, ಪ್ರೊ. ಕೆ.ಎಚ್‌.ಬೇಲೂರ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್, ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ರೋಹನ್ ಜಗದೀಶ್,  ಮಲ್ಲಣ್ಣ ಪರಡ್ಡಿ, ಹೇಮರಡ್ಡಿ ನೀಲಗುಂದ, ಪ್ರೇಮಕ್ಕ ಮೇಟಿ, ವಿ.ಆರ್‌.ದೇವರಡ್ಡಿ ಸೇರಿದಂತೆ ಗದಗ ಜಿಲ್ಲಾ ರಡ್ಡಿ ಸಮಾಜದ ಪದಾಧಿಕಾರಿಗಳು, ಗಣ್ಯರು, ಹಿರಿಯರು ಹಾಜರಿದ್ದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ  ರವಿ ಮೂಲಿಮನಿ ಸರ್ವರನ್ನು ಸ್ವಾಗತಿಸಿದರು.    ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ ವಂದಿಸಿದರು.