ಭಾಷಾಭಿಮಾನ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯೋಣ: ಶ್ರೀದೇವಿ ವಡೆಯರ

ಭಾಷಾಭಿಮಾನ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯೋಣ: ಶ್ರೀದೇವಿ ವಡೆಯರ Let's take the pride in language and culture to the next generation: Sridevi Vadeyar

ಬೆಳಗಾವಿ 5: ಕನ್ನಡ ನಾಡು ನುಡಿಗಾಗಿ ಹೋರಾಡಿದ ಮಹನೀಯರನ್ನು, ಕವಿ ಸಾಹಿತಿಗಳನ್ನು ನೆನಪಿಸಿಕೊಳ್ಳಬೇಕು ಅದರಂತೆ ಅವರ ತ್ಯಾಗ, ಸೇವೆಯನ್ನು ಮಕ್ಕಳು, ಮೊಮ್ಮಕ್ಕಳಿಗೆ ತಿಳಿ ಹೇಳಬೇಕು. ಭಾಷಾಭಿಮಾನ, ನಮ್ಮ ಸಂಸ್ಕೃತಿಯನ್ನು ಮಂದಿನ ತಲೆಮಾರಿಗೆ ಕೊಂಡೊಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶ್ರೀದೇವಿ ವಡೆಯರ ಅವರು ಇಂದಿಲ್ಲಿ ಹೇಳಿದರು. 

ಬೆಂಗಳೂರಿನ ಸಾಯಿಸುಮುಖ ಟೆಲಿಕಾಂ ಕ್ಲಸ್ಟರ್ ರಹವಾಸಿ ಸಂಘದವರು ಹಮ್ಮಿಕೊಂಡಿದ್ದ ನವೆಂಬರ್ ದಿ. 1 ರಾಜ್ಯೋತ್ಸವ ಸಂಭ್ರಮ ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು  ಮಾತನಾಡಿದರು. 

ಪರಭಾಷೆಯ ಬೆನ್ನು ಹತ್ತದೆ ಕಿವಿಗೆ ಮಧುರವೆನ್ನಿಸುವ ಶುದ್ಧ ಕನ್ನಡ ಭಾಷೆಯನ್ನು ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಇಪ್ಪತ್ತು ಹಿ ಮುವತ್ತು ವರ್ಷಗಳ ಹಿಂದೆ ಜನರಲ್ಲಿ ಇಂಗ್ಲೀಷ ವ್ಯಾಮೋಹ ಈಗಿನಷ್ಟಿರಲಿಲ್ಲ. ಇತ್ತೀಚೆಗೆ ಜನರಲ್ಲಿ ಪರಭಾಷೆಯ ಬಳಿಕೆ ಹೆಚ್ಚಾಗುತ್ತಲಿದೆ. ಇದಕ್ಕೆ ನಮ್ಮಲ್ಲಿ ಹೆಚ್ಚುತ್ತಲಿರುವ ವಿದೇಶಗಳ ಒಡನಾಟವೇ ಮುಖ್ಯ ಕಾರಣವಿರಬಹುದು ಎಂದು ಶ್ರೀದೇವಿಯವರು ಹೇಳಿದರು. 

ಎಲ್ಲ ಭಾಷೆಗಳನ್ನು ಕಲಿಯಬೇಕು ಆದರೆ ಮಾತೃಭಾಷೆಯನ್ನು ಮರೆಯಬಾರದು. ಪಾಲಕರು ಇದಕ್ಕೆ ಜವಾಬ್ಧಾರಿ ವ್ಯಕ್ತಿಗಳಾಗುತ್ತಾರೆ. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡ ಬಳಿಕೆಯನ್ನು ರೂಢಿಸಿಕೊಳ್ಳಬೇಕು. ಮನೆಯ ತಲೆಬಾಗಿಲು ಕನ್ನಡವಾದರೆ ಬೆಳಕಿಂಡಿಗಳು ಇಂಗ್ಲೀಷವಾಗಲಿ ಎಂದು ಅವರು ಹೇಳಿದರು. 

ಕಾರ್ಯದರ್ಶಿ ಸಂಜೀವ ಕುಲಕರ್ಣಿಯವರು ಅತಿಥಿಗಳಾಗಿ ಆಗಮಿಸಿದ್ದ ವೆಂಕಟೇಶ ಮೂರ್ತಿಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೂರ್ತಿಯವರು, ಧರ್ಮ, ಜಾತಿ, ಮತ, ಪಂಥಗಳನ್ನು ಬಿಟ್ಟು ನಾವು ಕನ್ನಡಿಗರೆಲ್ಲ ಒಂದಾಗಬೇಕು. ಇಂದು ಕೇವಲ ಕನ್ನಡ ಬಾಷೆಯ ಹಿಂದಿನ ಇತಿಹಾಸ ಸಂಸ್ಕೃತಿಯನ್ನು ನೆನಪಿಸಿಕೊಳ್ಳುತ್ತ ಕೂಡುವುದಲ್ಲದೇ ಬಾಷೆಯ ಭವಿಷ್ಯದ ಕುರಿತು ಚಿಂತಸಬೇಕಾದದು ಅತ್ಯವಶ್ಯವಾಗಿದೆ ಎಂದು ಹೇಳಿದರು.  

ಪುಟ್ನಂಜಪ್ಪ, ಶ್ರೀಕಂಠಯ್ಯ, ಸಹಕಾರ್ಯದರ್ಶಿ ಬಿ. ಎಸ್‌. ಸತ್ಯನಾರಾಯಣ, ಖಜಾಂಚಿ ಶುಭಂ ಭೋಜಕ್, ಸದಸ್ಯರಾದ ಬೃಂದಾ, ಲತಾ, ಎಚ್‌.ಬಿ. ಜಯಶ್ರೀ, ಮೋಹನ ಗೌಡ, ನವನೀತ ಸರದಾರ, ಪುರಷೋತ್ತಮ, ಅಲೋಕ ಭಟ್ ಉಪಸ್ಥಿತರಿದ್ದರು. ಮಾನಸ, ಮನಸ್ವಿ ಅನ್ನಪೂರ್ಣ ಅವರು ಕನ್ನಡ ನಾಡು ನುಡಿ ಕುರಿತಾದ ಹಾಡುಗಳನ್ನು ಹಾಡಿದರು. ಶೋಭಾ ಪಾರ್ವತಿಕರ ಪ್ರಾರ್ಥಿಸಿದರು. ಜಯಶ್ರೀಯವರು ವಂದಿಸಿದರು. ವಿದ್ಯಾವತಿ ನಿರೂಪಿಸಿದರು.