ನಮಗೆಲ್ಲರಿಗೂ ಒಂದಲ್ಲ ಒಂದು ಕ್ಷಣ ಬದುಕನ್ನು ಕೊನೆಗೊಳಿಸಿಕೊಳ್ಳಬೇಕೆಂಬ ಆಲೋಚನೆ ಬಂದಿರುತ್ತದೆ. ಸಾಕಪ್ಪ ಸಾಕು ಈ ಬಾಳುವೆ ಎಂದೆನಿಸಿರುತ್ತದೆ. ಹೇಗಪ್ಪ ಬದುಕೋದು ಈ ಕೊರತೆಗಳ ಮಧ್ಯೆ ಎಂಬ ಚಿಂತೆ ಕವಿದಿರುತ್ತದೆ. ಸಾಲು ಸಾಲಾಗಿ ಬರುವ ಕಷ್ಟಗಳು ಹಣಿದು ಹೈರಾಣಾಗಿಸಿ ಮಕಾಡೆ ಮಲಗಿಸಿರುತ್ತವೆ. ಅವಮಾನ, ಸೋಲು, ಹಿಯಾಳಿಕೆ ಬದುಕಿನ ಬಗ್ಗೆ ರೇಜಿಗೆ ಹುಟ್ಟಿಸಿರುತ್ತವೆ. ಇಷ್ಟಪಟ್ಟವರೆಲ್ಲ ನೋವು ನೀಡಿ ಕಳಚಿಕೊಂಡಿರುತ್ತಾರೆ. ಇಂತಹ ಕ್ಷಣಗಳಲ್ಲಿಯೇ ಅಲ್ಲವೇ ಸಾವಿನ ಬಗ್ಗೆ, ಆತ್ಮಹತ್ಯೆಯ ಕುರಿತು ನಾವು ಆಲೋಚಿಸುವುದು? ಈ ಆಲೋಚನೆ ಬಂತೆಂದರೆ ಖಿನ್ನತೆ ನಮ್ಮನ್ನು ಮುತ್ತಿಕೊಂಡು ಬದುಕಿನ ಎಲ್ಲ ಸಡಗರಗಳನ್ನು ತಿಂದು ತೇಗುತ್ತದೆ. ಓದು, ಬರಹ, ಮನರಂಜನೆ ಎಲ್ಲದರಲ್ಲೂ ಮನಸು ವಿಮುಖವಾಗುತ್ತದೆ. ಯಾವುದರಲ್ಲಿಯೂ ಆಸಕ್ತಿ ಇಲ್ಲದ ಮನಸಿಗೆ ಸಾಂತ್ವನ ನೀಡಿ, ಮತ್ತೆ ಹೊಸ ಬದುಕಿನತ್ತ, ನಲಿವಿನ ಹಾದಿಯತ್ತ ಕರೆತರುವುದು ಕಷ್ಟವಾಗುತ್ತದೆ.
ಒಂದು ಸಣ್ಣಕಥೆ. ಕಾಲಿಗೆ ಚಪ್ಪಲಿಯಿಲ್ಲ ಎಂದು ಬೇಸರಿಸಿಕೊಂಡವನೊಬ್ಬ ‘ಛೇ ನನ್ನ ಬದುಕು ಹೀಗಾಯ್ತಲ್ಲ? ನಡೆದಾಡಲು ಒಂದು ಜೊತೆ ಚಪ್ಪಲಿ ಕೂಡ ಇಲ್ಲದ ಬದುಕು ಬದುಕಾ?’ ಎಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ. ಹೇಗಿದ್ದರೂ ಸಾಯ್ತೀನಿ, ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಿಸಿ, ಮುಂದಿನ ಜನ್ಮದಲ್ಲಾದರೂ ನನಗೆ ಒಳ್ಳೇ ಫ್ಯಾಮೀಲಿಯಲ್ಲಿ ಹುಟ್ಟಿಸಪ್ಪ ಎಂದು ಕೇಳಿಕೊಳ್ಳೋಣ ಎಂದು ಗುಡಿಗೆ ಹೋದ. ಕೈಮುಗಿದು ಮರಳಿ ಬರುವಾಗ ದೇವಸ್ಥಾನದ ಇದಿರಿಗೆ ಎರಡೂ ಕಾಲಿಲ್ಲದವನೊಬ್ಬ ಖುಷ್ ಖುಷಿಯಾಗಿ ಹಾಡು ಹೇಳ್ತಾ ಭಿಕ್ಷೆ ಬೇಡ್ತಾ ಇದ್ದ. ಆತ್ಮಹತ್ಯೆ ಮಾಡಿಕೊಳ್ಳುವವನ ಕಣ್ಣಲ್ಲಿ ನೀರು. ಸಾಯುವ ಆಲೋಚನೆ ಕೈಬಿಟ್ಟವನೆ ಬದುಕುವ ಮಾರ್ಗದ ಅನ್ವೇಷಣೆಗೆ ಹೊರಟ. ಬೀಸುವ ಗಾಳಿಗೆ ಎದೆಯೊಡ್ಡದವನು ಚಂಡಮಾರುತದ ಬೆನ್ನತ್ತಲಾರ ಎನ್ನುತ್ತಾರೆ. ಬದುಕಿನಲ್ಲಿ ಬಂದಿರುವ ಎಲ್ಲ ಸಮಸ್ಯೆಗಳನ್ನು ಎದುರಿಸುವವನು ನಿಜವಾದ ಧೀರ ಅನ್ನಿಸಿಕೊಳ್ಳುತ್ತಾನೆ. ‘ಕಷ್ಟಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತವಾ?’ ಎಂಬ ಜನಜನಿತ ಅನುಭವದ ನುಡಿಯೇ ಇದೆ. ಒಬ್ಬ ಕವಿ ಸಾರ್ಥಕ ಬದುಕಿನ ಸೂತ್ರವನ್ನು ತನ್ನ ಕವಿತೆಯಲ್ಲಿ ಹೀಗೆ ಪ್ರತಿಬಿಂಬಿಸುತ್ತಾನೆ.
ಮತ್ತ ಮತ್ತ ಕಣ್ಣಾಗ ಕಣ್ಣೀರ ಹನಿಯಾಕ
ಕಷ್ಟಗಳು ನಮಗ ಬರದ ಬರತಾವೇನ ಮರಕ?
ದುಃಖಗಳನು ಧೈರ್ಯವಾಗಿ ಎದುರಿಸಬೇಕ
ನೋವಿನಲ್ಲೂ ನಲಿವ ಕಾಣಬೇಕ
ರೊಕ್ಕ ರೂಪಾಯಿ ಯಾಕ ಬೇಕ ಬಾಳುವೆ ಮಾಡಾಕ?
ನೆಮ್ಮದಿಯೊಂದಿದ್ದರ ಸಾಕ ಮುಖದಾಗ
ಮಂದನಗೀ ಅರಳಾಕ.....
ನಮ್ಮ ಎಲ್ಲ ಇಲ್ಲಗಳ ನಡುವೆ ನಾವು ಕೊರಗುತ್ತಾ ಬದುಕು ಸವೆಸುವುದಕ್ಕಿಂತ ನಮ್ಮಲ್ಲಿ ಇರುವುದರ ಕಡೆಗೆ ಗಮನ ಹರಿಸುತ್ತ ಸಂತೋಷದಿಂದ ಬದುಕನ್ನು ನಡೆಸಬಹುದು. ಕವಿ ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ತಮ್ಮ ಒಂದು ಕವಿತೆಯಲ್ಲಿ ಹೇಳುವಂತೆ,
ಕಳೆದು ಹೋದುದಕೆ ಕೊರಗ ಬಿಡು
ಉಳಿದಿವೆ ಎಷ್ಟೋ ಹರುಷಪಡು
ಕಳೆಯುವ ಕೂಡುವ ಲೆಕ್ಕವನಳಿಸಿ
ಮನಸಿನ ಸ್ಲೇಟನು ಖಾಲಿ ಇಡು
ನೆಲದ ಮೇಲೆ ನಡೆಯುವವನು ಸೈಕಲ್‌ಗೆ ಆಸೆಪಟ್ಟಂತೆ, ಸೈಕಲ್ ಮೇಲೆ ಹೋಗುವವನು ಬೈಕ್ ಹತ್ತಬೇಕೆಂದು ಬಯಸಿದಂತೆ, ಬೈಕ್ ಮೇಲಿನವನು ನಾಲ್ಕು ಚಕ್ರದ ವಾಹನಕ್ಕೆ ಹಾತೊರೆಯುವಂತೆ ಇಂದು ಎಷ್ಟೋ ಜನ ತಮ್ಮಲ್ಲಿ ಇಲ್ಲದ ವಸ್ತುಗಳ ಬಗ್ಗೆಯೇ ಸದಾ ಧೇನಿಸಿ ಇರುವ ಖುಷಿಯನ್ನು ಕಳೆದುಕೊಳ್ಳುತ್ತಿದ್ದಾರೆ. ನಮಗಿಂತ ಕೆಳಗಿನವರನ್ನು ನೋಡಿ ಬದುಕು ನಡೆಸಬೇಕೇ ವಿನಹ, ನಮಗಿಂತ ಮೇಲಿನವರನ್ನು ನೋಡಿ ಅಲ್ಲ. ‘ಯೋಗಿ ಪಡೆದದ್ದು ಯೋಗಿಗೆ ಭೋಗಿ ಪಡೆದದ್ದು ಭೋಗಿಗೆ’ ಎಂಬ ಗಾದೆ ಮಾತೇ ಇಲ್ಲವೇ? ಇಷ್ಟು ನಮ್ಮಲ್ಲಿ ಇದೆಯಲ್ಲ, ಇಷ್ಟನ್ನು ದೇವರು ನಮಗೆ ಕರುಣಿಸಿದ್ದಾನಲ್ಲ ಅದಕ್ಕೆ ಕೃತಜ್ಞರಾಗಿರೋಣ. ಬೇರೆಯವರ ಬಳಿಯಲ್ಲಿರುವುದು ನಮ್ಮ ಬಳಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತ, ಅವರ ಖುಷಿಗೆ ಮರುಗುತ್ತಾ, ಅವರ ಮೇಲೆ ಹೊಟ್ಟೆಕಿಚ್ಚು ಪಡುವುದು ಬೇಡ.
ಗೋಪಾಲಕೃಷ್ಣ ಅಡಿಗರು ಹೇಳಿದ ಹಾಗೆ ‘ಇರುವುದೆಲ್ಲವನು ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ನಿಜ. ಆದರೆ ಅದಕ್ಕೋಸ್ಕರ ಇರುವ ಸಂತಸದ ಗೋಣು ಮುರಿದು ಇಲ್ಲಗಳ ಬೆನ್ನು ಬೀಳುವುದು ಉಚಿತವಲ್ಲ. ವಾಮಮಾರ್ಗದ ಮೂಲಕ ಅವುಗಳನ್ನು ಪಡೆಯಬೇಕೆನ್ನುವುದು ದುರಾಸೆಯ ಪರಮಾವಧಿ. ನಮ್ಮೆಲ್ಲ ಇಲ್ಲಗಳ ನಡುವೆ ನಾವಿರುವುದಕ್ಕಿಂತ ಇರುವಿಕೆಗಳ ಮಧ್ಯೆಯೇ ಬದುಕು ಸಾಗಿಸುವುದು ಒಳ್ಳೆಯದು. ನನ್ನ ಸಂಬಳ ಕಡಿಮೆ ಎಂದು ಕೊರಗುವ ಸರ್ಕಾರಿ ನೌಕರ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ಕೂಲಿಕಾರರನ್ನ ನೋಡಬೇಕು. ನನಗೆ, ನನ್ನವರು ಯಾರೂ ಇಲ್ಲ ಅಂತ ನೋಯುವವನು ಬೀದಿಬದಿ ಅಲೆಯುವ ಅನಾಥರನ್ನು ಗಮನಿಸಬೇಕು. ನನ್ನದೇ ದೊಡ್ಡ ಸಮಸ್ಯೆ ಎಂದು ಹೇಳಿಕೊಂಡು ತಿರುಗುವವನು ಅದಕ್ಕಿಂತ ದೊಡ್ಡ ಸಮಸ್ಯೆ ಇರುವವನನ್ನು ಭೇಟಿಯಾಗಬೇಕು. ಈ ಜಗತ್ತಿನಲ್ಲಿ ಕಣ್ಣಿಲ್ಲದವರು, ಕಾಲಿಲ್ಲದವರು, ಕೈಯಿಲ್ಲದವರು ಎಷ್ಟು ಅದ್ಭುತವಾಗಿ ಬಾಳುವೆ ನಡೆಸುತ್ತಿದ್ದಾರೆ ಗೊತ್ತಾ? ದೇಹದ ಎಲ್ಲ ಅವಯವಗಳು ಸರಿಯಾಗಿದ್ದು ನಾವು ಬದುಕಿಗೆ ವಿಮುಖವಾಗುತ್ತಿದ್ದೇವೆ ಎಂದರೆ ನಮ್ಮಷ್ಟು ಮೂರ್ಖರು ಮತ್ಯಾರಿಲ್ಲ ಎಂದೇ ಹೇಳಬೇಕು. ನನಗೆ ಖ್ಯಾತ ಕವಿ ಡಾ. ದೊಡ್ಡರಂಗೇಗೌಡ ಅವರ ಕವಿತೆ ನೆನಪಾಗುತ್ತದೆ....
ಏಳು-ಬೀಳು ಇರುವುದೇನೇ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ-ದುಃಖ ಕಾಣೋದೇನೇ ಉಪ್ಪು-ಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗಬೇಕಯ್ಯ ಓ ಗೆಳೆಯಾ.. ಕೈಯ್ಯ ಚೆಲ್ಲಿ
ಕೊರಗಬೇಡಯ್ಯ....
ಗೋಣು ಹಾಕಿ ಕೂರಬೇಡ ಗತ್ತಿನಾಗೆ ಬಾಳ ನೋಡ....
ಈ ಸುಂದರವಾದ ಬದುಕಿನಲ್ಲಿ ಬರೀ ಇಲ್ಲಗಳ ಪಟ್ಟಿಯನ್ನೇ ರಚಿಸುತ್ತಾ ಬಾಳು ಹಾಳುಮಾಡಿಕೊಳ್ಳಬಾರದು. ತೊಂದರೆ, ತಾಪತ್ರಯಗಳೆನೇ ಬರಲಿ ಅಂಜದೇ, ಅಳುಕದೇ ಎದೆಯೊಡ್ಡಿ ಎದುರಿಸುವ ಕಲೆ ನಮಗೆ ಸಿದ್ಧಿಸಬೇಕು. ಕ್ಷುಲ್ಲಕ ಕಾರಣಕ್ಕೆ ಅರ್ಧಕ್ಕೆ ಬದುಕನ್ನು ಕೊನೆಗೊಳಿಸಿಕೊಂಡು ನಮ್ಮನ್ನು ಇಷ್ಟಪಟ್ಟವರ ನೋಯಿಸಬಾರದು. ಡಿ.ವಿ.ಜಿ. ಒಂದು ಕಡೆ ಹೇಳಿದಂತೆ ‘ನೋವು ಬಂತೆಂದು ಸಾವು ಬಯಸುವುದೇ? ನೆಗಡಿಯಾಯಿತೆಂದು ಮೂಗು ಕತ್ತರಿಸಿಕೊಂಡವರುಂಟೆ?’. ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು. ಬದುಕಿನ ಎಲ್ಲ ಮಜಲುಗಳನ್ನು ಆನಂದದಿಂದ ಅನುಭವಿಸೋಣ. ಕೊರತೆಗಳತ್ತಲೇ ಬೆರಳು ತೋರಿಸದೆ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಸಾಧನೆಯ ತುತ್ತತುದಿ ತಲುಪೋಣ. ಸಕಲರಿಗೂ ಲೇಸನ್ನೇ ಬಯಸೋಣ.
- * * * -