ಸಾಹಿತ್ಯ ಜಾತ್ರೆ ಅದ್ದೂರಿಯಾಗಿ ನಡೆಸೋಣ: ಡಾ.ಹುಲ್ಲೋಳಿ

ಸಾಹಿತ್ಯ ಜಾತ್ರೆ ಅದ್ದೂರಿಯಾಗಿ ನಡೆಸೋಣ: ಡಾ.ಹುಲ್ಲೋಳಿ Let's hold the literary fair in a grand manner: Dr. Hulloli

             ಹಾರೂಗೇರಿ 18: ಸಾಹಿತ್ಯ ಜಾತ್ರೆ ಎಲ್ಲರ ಮನೆ ಮತ್ತು ಮನಸ್ಸಿನ ಹಬ್ಬವಾಗಬೇಕು. ಸಮ್ಮೇಳನ ಬೆಳಗಾವಿಯ ಸಾಹಿತ್ಯ, ಕಲೆ, ಸಂಸ್ಕೃತಿ, ಸಂಪ್ರದಾಯದ ಜಾತ್ರೆಯಾಗಬೇಕು. ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಸೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಶ್ರಮಿಸಬೇಕಿದೆ ಎಂದು ಬೆಳಗಾವಿ ಬಿಮ್ಸ್‌ ಆಡಳಿತಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಹೇಳಿದರು.  ಪಟ್ಟಣದ ಎಂ.ಬಿ.ಪಾಟೀಲ ವಿಜ್ಞಾನ ಪಿ.ಯು ಕಾಲೇಜಿನ ಸಭಾಭವನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ.ವಿ.ಎಸ್‌.ಮಾಳಿ ಅವರ ಶಿಷ್ಯಬಳಗದ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

            ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಡಾ.ವಿ.ಎಸ್‌.ಮಾಳಿ ಗುರುಗಳ ಸರ್ವಾಧ್ಯಕ್ಷತೆಯಲ್ಲಿ ಹಾರೂಗೇರಿಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಸಮ್ಮೇಳನ ವಿಶೇಷ ಮತ್ತು ವೈಶಿಷ್ಠ್ಯತೆಗಳಿಂದ ಕೂಡಿರಲು, ಜನಸಾಮಾನ್ಯರನ್ನು ಸಾಹಿತ್ಯ ಸಮೇಳನದೆಡೆಗೆ ಆಕರ್ಷಿಸಲು ವಿಶೇಷ ಅತಿಥಿಗಳು, ಕಲೆ ಹಾಗೂ ಸಾಹಿತ್ಯಿಕ ಕೌಶಲ್ಯಗಳ ಅನಾವರಣ ಮಾಡಿ, ಸಮ್ಮೇಳನವು ಜನಮಾನಸದಲ್ಲಿ ನೆಲೆಸುವಂತೆ ಅದ್ದೂರಿಯಾಗಿ ನಡೆಸಲು ಪೂರ್ವ ಸಿದ್ದತೆ ಕೈಗೊಳ್ಳುವಂತೆ ಡಾ.ಹುಲ್ಲೋಳಿ ತಿಳಿಸಿದರು. 

               ರಾಯಬಾಗ ತಾಲೂಕು ಕಸಾಪ ಅಧ್ಯಕ್ಷ ಈರಣ್ಣಗೌಡ ಪಾಟೀಲ ಮಾತನಾಡಿ ಅಕ್ಷರ, ಸಂಸ್ಕಾರದ ಜೊತೆಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಸಾಹಿತಿ ಡಾ.ವಿ.ಎಸ್‌.ಮಾಳಿ ಸರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ 17ನೇ ಜಿಲ್ಲಾ ಕಸಾಪ ಸಮ್ಮೇಳನ ಚಾರಿತ್ರಿಕವನ್ನಾಗಿಸಲು ನಾಡಿನ ಸಾಹಿತಿಗಳು, ಕವಿಗಳು ಹಾಗೂ ಎಲ್ಲ ಕನ್ನಡಪರ ಮನಸ್ಸುಗಳ ಸಹಕಾರ ಅಗತ್ಯವಾಗಿದೆ ಎಂದರು. 

                ಹಿರಿಯ ಸಾಹಿತಿಗಳಾದ ಡಿ.ಎಸ್‌.ನಾಯಿಕ, ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್‌.ಮಠಪತಿ, ಲೇಖಕಿ ಡಾ.ರತ್ನಾ ಬಾಳಪ್ಪನವರ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಅಗತ್ಯವಿರುವ ಮಾರ್ಗಸೂಚಿಗಳ ಕುರಿತು ಮಾತನಾಡಿದರು. ವಿವಿಧ ಸಿದ್ಧತೆ ಚರ್ಚೆ : ಸಮ್ಮೇಳನದಲ್ಲಿ ಗೌರವ ಸನ್ಮಾನ, ವೇದಿಕೆ ನಿರ್ವಹನೆ, ಸಮಯ ಪಾಲನೆ, ಅತಿಥಿಗಳ ಆತಿಥ್ಯ, ವಸತಿ-ಭೋಜನ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸಾಹಿತ್ಯ ಚಟುವಟಿಕೆಗಳ ವೇಳಾಪಟ್ಟಿ, ಸಾಹಿತ್ಯ ವೇದಿಕೆ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು. 

             ನಿಕಟಪೂರ್ವ ಅಧ್ಯಕ್ಷ ರವೀಂದ್ರ ಪಾಟೀಲ, ಬಾಗಲಕೋಟ ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ಅರಕೇರಿ, ಗಣ್ಯರಾದ ಜಿನ್ನಪ್ಪ ಅಸ್ಕಿ, ಎಸ್‌.ಎ.ದಟವಾಡ, ಸಿದ್ದಪ್ಪ ನಾಗನೂರ, ಪಿ.ಎಂ.ದರೂರ, ಎಸ್‌.ಬಿ.ಕ್ಯಾಸ್ತಿ, ಎಲ್‌.ಎಸ್‌.ಚೌರಿ, ಮಧುಸೂದನ ಬೀಳಗಿ,  ಭರಮು ನಾಗನೂರ, ರವಿ ಸವದಿ, ಆರ್‌.ಎನ್‌.ಮುರಾರಿ, ಸಂಗಮೇಶ ನಾಯಿಕ, ಎಲ್‌.ಬಿ.ಜಾಯಗೋಣಿ, ಬಿ.ಪಿ.ಹುಲ್ಲೋಳಿ, ಪೋಪಟ ನಾಯಿಕ, ಸಂತೋಷ ತಮದಡ್ಡಿ, ವಿಕ್ರಮ ಪತ್ತಾರ ಹಾಗೂ ಕನ್ನಡಪರ ಸಂಘಟನೆಗಳು, ಕಸಾಪ ಸದಸ್ಯರು, ಅಟೋ ರಿಕ್ಷಾ, ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.  ಸ್ವಾಗತ ಟಿ.ಎಸ್‌.ವಂಟಗೂಡಿ ಸ್ವಾಗತಿಸಿದರು. ಎಂ.ಎಸ್‌.ಬಳವಾಡ ಕಾರ್ಯಕ್ರಮ ನಿರೂಪಿಸಿದರು.