ತಂಬಾಕುಮುಕ್ತ ಸಮಾಜಕ್ಕೆ ಪಣ ತೊಡೋಣ: ಬಸವರೆಡ್ಡಿ

ತಂಬಾಕುಮುಕ್ತ ಸಮಾಜಕ್ಕೆ ಪಣ ತೊಡೋಣ: ಬಸವರೆಡ್ಡಿ  Let's commit to a tobacco-free society: Basavareddy

ದೇವರಹಿಪ್ಪರಗಿ 07: ತಂಬಾಕು ಸೇವನೆಯಿಂದ ಆರ್ಥಿಕ ನಷ್ಟ ಜತೆಗೆ ಹಲವಾರು ರೋಗಗಳಿಂದ ದುರ್ಬಲರಾಗುತ್ತೇವೆ. ಆದ್ದರಿಂದ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು ಎಂದು ನಿವೃತ್ತ ಪ್ರಾಧ್ಯಾಪಕರು ಹಾಗೂ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್‌.ಎನ್‌.ಬಸವರೆಡ್ಡಿ ಹೇಳಿದರು.  

ಪಟ್ಟಣದ ದಾನಮ್ಮ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ನಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ತಂಬಾಕು ಸೇವನೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ರಕ್ತಹೀನತೆ ಉಂಟಾಗಿ ಶ್ವಾಸಕೋಶ, ಕರುಳು ರೋಗಗಳಿಗೆ ಬಲಿಯಾಗಬೇಕಾಗುತ್ತದೆ. ತಂಬಾಕು ಸೇವನೆ ಇತರ ವ್ಯಕ್ತಿಗಳಿಗೂ ಮಾರಕವಾಗಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಆದ್ದರಿಂದ ದುಶ್ಚಟಗಳನ್ನು ಮೆಟ್ಟಿ ನಿಂತು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ಅಂದಾಗ ಮಾತ್ರ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಧರ್ಮಸ್ಥಳದ ಸಂಸ್ಥೆಯಿಂದ ಹಲವಾರು ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಂಡು ಸಾವಲಂಬಿ ಜೀವನ ಮಾಡಬೇಕು. ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರ ಪ್ರಕಾರ ಎಂಟು ಮಿಲಿಯನ್ ಜನರು ತಂಬಾಕು ಸೇವನೆಯಿಂದ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯವಂತ ಸಮಾಜ ಕಟ್ಟಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.  

ಪ್ರಾಸ್ತಾವಿಕವಾಗಿ ಧರ್ಮಸ್ಥಳ ಸಂಸ್ಥೆಯ ವಲಯದ ಮೇಲ್ವಿಚಾರಕರಾದ ವಿಶ್ವನಾಥ ಅವರು ಮಾತನಾಡಿ, ತಂಬಾಕು ಸೇವನೆಯಿಂದ ದೂರವಿದ್ದಲ್ಲಿ ಶ್ವಾಸಕೋಶ ಸಂಬಂಧಿತ ರೋಗಗಳಿಂದ ದೂರವಿರಲು ಸಾಧ್ಯವಿದೆ ಎಂದರು. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಉಪಯುಕ್ತವಾದ ಮಾಹಿತಿ ನೀಡಿದರು.  

ವಲಯದ ಸೇವಾ ಪ್ರತಿನಿಧಿ ರೇಣುಕಾ ಬಿರಾದಾರ, ನೀಲಮ್ಮ ಬಿರಾದಾರ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.