ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ: ಸಾವಿತ್ರಿ ಮಜುಂದಾರ

ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ: ಸಾವಿತ್ರಿ ಮಜುಂದಾರ Let's be proud to be born a woman: Savitri Majumdar

ಲೋಕದರ್ಶನ ವರದಿ 

ಗದಗ 28: ಸಮಾಜದಲ್ಲಿ ಮಹಿಳೆ ಎರಡು ರೀತಿಯ ಸಾಧನೆಗೆ ಮುಂದಾಗಬೇಕಿದೆ. ಒಂದು ಕೌಟುಂಬಿಕ ಸಾಧನೆಯಾದರೆ ಮತ್ತೊಂದು ಸಾಮಾಜಿಕ ಸಾಧನೆ. ಮಹಿಳೆಯಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇಲ್ಲ. ಆದರೆ ಸೂಕ್ತ ಅವಕಾಶದ ಅಗತ್ಯವಿದೆ. ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧಿಸಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣವೆಂದು ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಸಾವಿತ್ರಿ ಮಜುಮದಾರ ತಿಳಿಸಿದರು.  

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಮತ್ತು  ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ  ಮಹಿಳಾ ಸಬಲೀಕರಣ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ  ‘ಮಹಿಳೆ : ಅಧುನಿಕ ಸವಾಲುಗಳು’ ವಿಶೇಷ ಉಪನ್ಯಾಸ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿತ್ತು  

ಮುಂದುವರೆದು ಮಾತನಾಡಿದ ಅವರು ಹೆಣ್ಣಿಗೆ ಶಿಕ್ಷಣ, ರಾಜಕೀಯ, ತಂತ್ರಜ್ಞಾನ ಎಲ್ಲದರಲ್ಲೂ ಪ್ರಾತಿನಿಧ್ಯ ಸಿಗುತ್ತಿದೆ. ಅದರೆ ಹಕ್ಕುಗಳು ಸಿಗುತ್ತಿಲ್ಲ. ಮಹಿಳಾ ಹಕ್ಕುಗಳು ಭಿಕ್ಷೆಯಲ್ಲ ಎನ್ನುವುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಇಂದಿಗೂ ಸಂಪೂರ್ಣ ಸಮಾನತೆ ಸಾಧ್ಯವಾಗಿಲ್ಲ. ಆರ್ಥಿಕ ಸಮಾನತೆಯಂತೂ ಮಹಿಳೆಗೆ ದೂರದ ಬೆಟ್ಟವಾಗಿದೆ. ಹೆಣ್ಣಿನ ಹೆಸರಿನಲ್ಲಿ ಇಂದಿಗೂ ಆಸ್ತಿಯಿಲ್ಲ. ಇದ್ದರೂ ಆದಾಯ ತೆರಿಗೆ ಭಯಕ್ಕಾಗಿ ಸ್ವಲ್ಪ ಆಸ್ತಿ ಮಹಿಳೆಯ ಹೆಸರಿನಲ್ಲಿದೆ. ಹೆಣ್ಣಿನ ವಿದ್ಯೆ ಅಡುಗೆ ಮನೆಗೆ ಸೀಮಿತಗೊಂಡಿದೆ. ಯುದ್ಧದ ಕೆಟ್ಟ ಪರಿಣಾಮಗಳು ಮಹಿಳೆಯ ಮೇಲೆಯೇ ಹೆಚ್ಚು ಎನ್ನುವುದು ಸತ್ಯದ ಸಂಗತಿ. ಪಿತೃತ್ವ ವ್ಯವಸ್ಥೆ ಭಾರತೀಯ ಪರಂಪರೆಯ ಕಪ್ಪುಚುಕ್ಕೆ. ಮಾತೃತ್ವ ವ್ಯವಸ್ಥೆ ಹೊಂದಿರುವ ಕೇರಳ ಇದಕ್ಕೆ ಹೊರತಾಗಿದೆ. ಹೆಣ್ಣು ಅಧಿಕಾರದಲ್ಲಿದ್ದರೂ ಕಡೆಗಣಿಸಲಾಗುತ್ತದೆ. ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿದರೆ ದೇಶದ ಜಿ.ಡಿ.ಪಿ ಹೆಚ್ಚುತ್ತದೆ. ಎಲ್ಲ ಪುರುಷರೂ ಪುರುಷವಾದಿಗಳಲ್ಲ, ಎಲ್ಲ ಮಹಿಳೆಯರೂ ಸ್ತ್ರೀವಾದಿಗಳಲ್ಲ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಕೆ. ಮಠ ಅವರು ಹೆಣ್ಣನ್ನು ದೇವತೆಯನ್ನಾಗಿ ಮಾಡಿ, ಅವಳಿಂದಲೇ ಎಲ್ಲವನ್ನೂ ಕೇಳಲಾಗುತ್ತದೆ. ತ್ಯಾಗ, ಬಲಿದಾನವನ್ನೂ ಮಹಿಳೆಯಿಂದಲೇ ನೀರೀಕ್ಷಿಸಲಾಗುತ್ತದೆ. ಆದರೆ, ಮಹಿಳೆಯನ್ನು ಮಾನವರಂತೆ ನೋಡಲಾಗುತ್ತಿಲ್ಲ, ಈ ಕಾಲದಲ್ಲೂ ಹೆಣ್ಣುಮಕ್ಕಳನ್ನ ಗೌರವಿಸಿ ಎಂದು ಕೇಳಬೇಕೆಂದರೆ, ಅದು ನಮ್ಮ ದೌರ್ಭಾಗ್ಯ ಎಂದರು.  

ಕಾರ್ಯಕ್ರಮದಲ್ಲಿ ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ್ ನಿರೂಪಿಸಿದರು. ಕು. ಪಲ್ಲವಿ ಪ್ರಾರ್ಥಿಸಿದರು. ಶಿಲ್ಪಾ ಮ್ಯಾಗೇರಿ ಅತಿಥಿಗಳ ಪರಿಚಯಿಸಿದರು. ಪ್ರೊ. ವಿಶಾಲ ತೆಳಗಡೆ ಎಲ್ಲರನ್ನೂ ಸ್ವಾಗತಿಸಿದರು. ಪ್ರೊ. ಗೌರ ಯಳಮಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.  

ಇತ್ತೀಚಿಗೆ ಬಿಡುಗಡೆಗೊಂಡ ಸರಸೆ ಸರಸೆ ಗೀತೆಯು ಹೆಣ್ಣುಕುಲವನ್ನು ಅವಮಾನಿಸುವ ಉದ್ದೇಶದಿಂದಲೇ ರಚಿತಗೊಂಡಿದ್ದು. ಆತನ ತಾಯಿ, ಹೆಂಡತಿ, ಸಹೋದರಿಯರ ತಾಯ್ತನದ ಪ್ರೀತಿ ಮತ್ತು ಕಾಳಜಿಯನ್ನು ಕಂಡಿದ್ದರೆ ಆತ ಹಾಗೆ ಬರೆಯುತ್ತಿರಲಿಲ್ಲ. ತಾಯ್ತನ ಮಹಿಳೆಯರನ್ನ ಹಗುರವಾಗಿ ಬಿಂಬಿಸುವ ಇಂಥ ಹಾಡುಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿವೆ. ನಟಿಯರನ್ನ ಅಸಭ್ಯ ಆಂಗಲ್‌ಗಳಿಂದ ಚಿತ್ರೀಕರಿಸಿ, ಅವರ ಹೇಹದ ಮೇಲೆ ಅನಾವಶ್ಯಕ ಜೂಮ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುವುದು ಈ ಕಾಲದ ಅಯೋಗ್ಯತನ  

- ಸಾವಿತ್ರಿ ಮಜುಂದಾರ, ಸಾಹಿತಿ ಪತ್ರಕರ್ತೆ 

ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳು ಹೆಚ್ಚಾಗುತ್ತಿವೆ.  

ಸಾಹಿತಿಗಳು ಮತ್ತು ಪತ್ರಕರ್ತರಾದ ಸಾವಿತ್ರಿ ಮಜುಂದಾರ ಅವರು ಉಪನ್ಯಾಸ ನೀಡಲಿದ್ದಾರೆ. ಕಾರ‌್ಯಕ್ರಮದಲ್ಲಿ ಆಸಕ್ತರು ಭಾಗವಹಿಸಬಹುದು.