ಬೆಂಗಳೂರು, ಫೆ 03 : ‘ಪಂಚತಂತ್ರ‘ ಖ್ಯಾತಿಯ ವಿಹಾನ್ ನಾಯಕನಾಗಿ ನಟಿಸುತ್ತಿರುವ ‘ಲೆಟ್ಸ್ ಬ್ರೇಕಪ್’ ಚಿತ್ರದ ನಾಯಕಿಯಾಗಿ ಬೆಂಗಳೂರಿನ ಸ್ಪಂದನ ಆಯ್ಕೆಯಾಗಿದ್ದಾರೆ.
ಈ ಮೊದಲು ಈ ಚಿತ್ರದಲ್ಲಿ ಶ್ರೀಲೀಲ ನಾಯಕಿಯಾಗಿ ನಟಿಸುತ್ತಾರೆಂಬ ಸುದ್ದಿ ನೀಡಲಾಗಿತ್ತು ಕಾರಣಾಂತರಗಳಿಂದ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಸ್ಪಂದನ ನಾಯಕಿಯಾಗಿ ನಟಿಸುತ್ತಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮಲ್‌ನಲ್ಲಿ ವ್ಯಾಸಂಗ ಮಾಡಿರುವ ಸ್ಪಂದನ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆ ಹಾಗೂ ಅನುಪಮ್ ಖೇರ್ ಅವರ ಅಭಿನಯ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ ಈ ಚಿತ್ರದಲ್ಲಿ ನಾಯಕ ಹಾಗು ನಾಯಕಿ ಇಬ್ಬರೂ ಎಂ ಬಿ ಎ ವಿದ್ಯಾರ್ಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಲೆಟ್ಸ್ ಬ್ರೇಕಪ್’ ಚಿತ್ರದ ಫ಼ಸ್ಟ್ ಲುಕ್ ೨೦೨೦ ಫ಼ೆಭ್ರವರಿ ೧೪ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. ೨೦೨೦ರ ಮೇ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.
ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸ್ವರೂಪ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಸ್ವರೂಪ್ ನಿರ್ದೇಶಿಸಿದ್ದ ‘ಲಖನೌ ಟು ಬೆಂಗಳೂರು‘ ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಇದು ಅವರ ನಿರ್ದೇಶನದ ಎರಡನೇ ಚಿತ್ರ.
ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿಯ ‘ಲೆಟ್ಸ್ ಬ್ರೇಕಪ್‘ ಚಿತ್ರಕ್ಕೆ ಫ಼ಾರ್ ಎವರ್ ಎಂಬ ಅಡಿಬರಹವಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತ ನೀಡಲಿದ್ದಾರೆ. ಮೂರು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ.
ಶೇ ೯೦ರಷ್ಟು ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದರೆ, ೧೦ರಷ್ಟು ಭಾಗದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆ. ಉಳಿದ ತಾರಾಬಳಗ ಹಾಗೂ ತಂತ್ರಜ಼್ಞರ ಆಯ್ಕೆ ನಡೆಯುತ್ತಿದೆ.