ಧಾರವಾಡ 1: ಜಾಗತೀಕರಣ ಯುಗದಲ್ಲಿ ಮಹಿಳೆಗೆ ಕಾನೂನಿನ ಅರಿವು ಅವಶ್ಯವಾಗಿದೆ. ಮಹಿಳೆಯರಿಗಾಗಿ ಪಾಸು ಮಾಡಲಾದ ವೈವಿಧ್ಯಮಯ ಕಾನೂನುಗಳ ನೆರವನ್ನು ಪಡೆದು ಮಹಿಳೆಯರು ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಇಂಗ್ಲೀಷ ಪ್ರಾಧ್ಯಾಪಕಿ ಡಾ. ಶಾಮ್ಲಾ ರತ್ನಾಕರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಆಯೋಜಿಸಿದ್ದ "ಒಂದು ದಿನದ ಮಹಿಳಾ ಜಾಗೃತಿ ಸಮಾವೇಶ" ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಕರ್ನಾಟಕ ಆರ್ಟ್ಸ್ ಕಾಲೇಜಿನ ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ. ವಿ. ಶಾರದಾ ‘ಮಹಿಳೆ ಮತ್ತು ಆಸ್ತಿ ಹಕ್ಕಿನ ಕಾನೂನು’ ಕುರಿತು ಮಾತನಾಡುತ್ತಾ ವಿವಿಧ ಧರ್ಮಗಳ ಮಹಿಳೆಯರಿಗೆ ಅನ್ವಯಿಸುವ ಆಸ್ತಿ ಹಕ್ಕಿನ ಕಾನೂನುಗಳ ಬಗ್ಗೆ ತಿಳಿಯಪಡಿಸಿದರು. ನಮ್ಮ ದೇಶದಲ್ಲಿ ಕೇವಲ ಪ್ರತಿಶತ 25ರಷ್ಟು ಮಹಿಳೆಯರು ಮಾತ್ರ ತಮ್ಮ ಆಸ್ತಿಯ ಹಕ್ಕನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದ್ದರಿಂದ ಎಲ್ಲ ಮಹಿಳೆಯರು ತಮಗೆ ಬರಬೇಕಾದ ಆಸ್ತಿ ಹಕ್ಕನ್ನು ಪಡೆದುಕೊಳ್ಳುವುದು ಅವರ ಹಕ್ಕಾಗಿದೆ ಮತ್ತು ಪುರುಷರು ಅದನ್ನು ನೀಡಬೇಕಾಗಿರುವುದು ಅವರ ಕರ್ತವ್ಯವಾಗಿದೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಧಾರವಾಡ ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾನೂನು ಇದರ ಕುರಿತು ಮಾಹಿತಿ ಕೊಡುತ್ತಾ ಕುಟುಂಬದ ಮಹಿಳಾ ಸದಸ್ಯರ ಮೇಲೆ ಉಂಟಾಗುತ್ತಿರುವ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳ ಬಗ್ಗೆ ತಿಳಿಯಪಡಿಸಿದರು. ಇಂತಹ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹೆದರದೆ ಕಾನೂನಿನ ಉಪಯೋಗವನ್ನು ಮಾಡಿಕೊಂಡು ತಮ್ಮ ಮೇಲಾಗುವ ಹಿಂಸೆಗಳಿಗೆ ಪರಿಹಾರಗಳನ್ನು ಪಡೆದುಕೊಳ್ಳಬೇಕೆಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಮಹಿಳೆಯರೆಲ್ಲರೂ ಜಾಗೃತರಾಗಬೇಕೆಂದರು. ವೀರಶೈವ ಜಾಗೃತಿ ಮಹಿಳಾ ಮಂಡಲದ ಸದಸ್ಯರು ಪ್ರಾರ್ಥಿಸಿದರು. ಮಹಿಳಾ ಮಂಟಪದ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಮತ್ತು ಶಂಕರ ಕುಂಬಿ ವೇದಿಕೆ ಮೇಲಿದ್ದರು. ಡಾ. ಅರುಣಾ ಹಳ್ಳಿಕೇರಿ ಮತ್ತು ಸವಿತಾ ಕುಸುಗಲ್ಲ ಅತಿಥಿಗಳನ್ನು ಪರಿಚಯಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಸುಜಾತ ಹಡಗಲಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಅನೇಕ ಮಹಿಳೆಯರು ಪಾಲ್ಗೊಂಡಿದ್ದರು. ಸಮಾವೇಶವು ವಿನಾಯಕ ಮತ್ತು ವಿಜಯಲಕ್ಷ್ಮಿ ಕಮ್ಮಾರರ ಸಂಗೀತದೊಂದಿಗೆ ಪ್ರಾರಂಭವಾಯಿತು. ಕುಮಾರಿ ಧೃತಿ ದೇವರ ಸ್ತುತಿಯ ನೃತ್ಯ ಪ್ರದರ್ಶಿಸಿದಳು. ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಪ್ರೊ. ಹೊಲ್ಲೋಳಿ ಪರ್ಪ ಅಂತಕ್ಕನವರ, ಮಹಾಂತೇಶ್ ನರೇಗಲ್ಲ, ಇನ್ನಿತರರು ಹಾಜರಿದ್ದರು.