ಸ್ಪರ್ಧಾತ್ಮಕ ಯುಗದಲ್ಲಿ ಭಾಷಾ ಕೌಶಲ್ಯ ಭವಿಷ್ಯ ರೂಪಿಸುತ್ತದೆ: ರೋಹಿಣಿ ಜೆ.

ಸ್ಪರ್ಧಾತ್ಮಕ ಯುಗದಲ್ಲಿ ಭಾಷಾ ಕೌಶಲ್ಯ ಭವಿಷ್ಯ ರೂಪಿಸುತ್ತದೆ: ರೋಹಿಣಿ ಜೆ. Language skills shape the future in a competitive era: Rohini J.

ಸ್ಪರ್ಧಾತ್ಮಕ ಯುಗದಲ್ಲಿ ಭಾಷಾ ಕೌಶಲ್ಯ ಭವಿಷ್ಯ ರೂಪಿಸುತ್ತದೆ: ರೋಹಿಣಿ ಜೆ. 

 ಬೆಳಗಾವಿ 31:  ಭಾಷಾ ಕೌಶಲ್ಯ  ಬದುಕಿನ ಕೌಶಲ್ಯವು ಹೌದು. ಹದವರಿತು ಮಾತನಾಡುವುದು,  ಬದುಕಿನ ನಾಳೆಗಾಗಿ ಓದುವುದು, ಸಾಮಾಜಿಕ ಸಂವಹನಕ್ಕಾಗಿ ಮತ್ತು ಜ್ಞಾನಾರ್ಜನೆಗಾಗಿ ಭಾಷೆಯನ್ನು ಬಳಸುವುದು  ಈ ನಾಲ್ಕು ರೀತಿಯ ಕೌಶಲ್ಯಗಳು ಪ್ರಮುಖವಾಗಿವೆ ಎಂದು ರೋಹಿಣಿ ಜೆ ಅವರು ಹೇಳಿದರು. 

     ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಬೆಳಗಾವಿ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ 9 ನೇ  ಉಪನ್ಯಾಸ ಕಾರ್ಯಕ್ರಮವು ದಿ. 30ರಂದು  ಚಿಕ್ಕೋಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಯಿತು. 

     ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕರಾದ ರೋಹಿಣಿ ಜೆ. ಅವರು “ಭಾಷಾ ಕೌಶಲ್ಯಗಳು  ಹಾಗೂ ಸ್ಪರ್ಧಾತ್ಮಕ ಕನ್ನಡ” ವಿಷಯ  ಕುರಿತು ಮಾತನಾಡುತ್ತಾ, ಭಾಷಾ ಬಳಕೆ, ಸಂವಹನ, ಸಂಶೋಧನಾ ಪರಿಭಾಷೆ ಇವುಗಳ ಸರಿಯಾದ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೇಳುತ್ತಾ,  ಅಂಬೇಡ್ಕರ್ ಅವರನ್ನು ಇಂತಹ ಓದು ವಿಶ್ವಮಾನ್ಯರನ್ನಾಗಿ ರೂಪಿಸಿತು. ಅಂಬೇಡ್ಕರ್ ಅವರ ಸತತ ಅಧ್ಯಯನ ಮತ್ತು ಕಠಿಣವಾದ ಪರಿಶ್ರಮವು  ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪದವಿಗಳನ್ನು ಪಡೆಯುವಲ್ಲಿ ಸಹಕಾರಿಯಾಯಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಭಗೀರಥ ಪ್ರಯತ್ನ ಶೀಲರಾಗಬೇಕು ಎಂದು ಹೇಳಿದರು. 

     ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಬೆಳಗಾವಿ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ  ಸಂಚಾಲಕ ಶಿವರಾಜ ಎಸ್ ಅರಳಿ ಮಾತನಾಡುತ್ತಾ, ಚಕೋರ ವೇದಿಕೆಯು ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾಗಿದ್ದು, ಸಾಹಿತ್ಯದ ಮಹತ್ವವನ್ನು ಸಹೃದಯರಿಗೆ ತಲುಪಿಸುವುವಲ್ಲಿ ರಾಜ್ಯದಾದ್ಯಂತ ಕ್ರಿಯಾಶೀಲವಾಗಿ ಮುನ್ನಡೆದಿದೆ ಎಂದು ಹೇಳಿದರು. ಕರ್ನಾಟಕ ಸಾಹಿತ್ಯ  ಅಕಾಡೆಮಿಯ ನಿರ್ದೇಶನದಂತೆ ಪ್ರತಿ ತಿಂಗಳು ಈ ರೀತಿ ಉಪಯುಕ್ತ ಉಪನ್ಯಾಸಗಳನ್ನು ಚಕೋರ ವೇದಿಕೆ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ ಮತ್ತು  ಸಾಹಿತ್ಯದ ಅಭಿರುಚಿ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. 

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಚಾರ್ಯರಾದ ಎಂ ಎಸ್ ಮಾಳಗೆ ಅವರು ಮಾತನಾಡುತ್ತಾ, ಭಾಷೆ ವ್ಯಕ್ತಿತ್ವ ರೂಪಿಸುತ್ತದೆ. ಸಾಹಿತ್ಯದ ಅಭಿರುಚಿಯನ್ನು ಬೆಳೆಸುತ್ತದೆ. ಹಾಗಾಗಿ ಇಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಂತಹ ದೊಡ್ಡ ಸಂಸ್ಥೆ ಇಂತಹ ಜ್ಞಾನಮುಖಿ ಯೋಜನೆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಾಹಿತ್ಯ ಮತ್ತು ಭಾಷೆಯ ಅಧ್ಯಯನದ ಮಹತ್ವವನ್ನು ಈ ಮೂಲಕ ತಲುಪಿಸುವಲ್ಲಿ ಯಶಸ್ವಿಯಾಗಿದೆ ಹೀಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಸಾಹಿತ್ಯ ಸೇವೆಗಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. 

   ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ವಾಯ್ ಆಯ್ ಜಮಾದಾರ ಸ್ವಾಗತಿಸಿದರು. ಪ್ರೊ. ದೇವೆಂದ್ರ ಮಂಡೇದ ನಿರೂಪಿಸಿದರು. ಪ್ರೊ ಎ ಸಿ ಪೂಜೇರಿ ವಂದಿಸಿದರು. ಪದವಿ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.