ಕ್ಯಾಸನೂರು ಹಾಗೂ ಮತ್ತಿಹಳ್ಳಿ ಗ್ರಾಮಗಳ 450 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ

ಕ್ಯಾಸನೂರು ಹಾಗೂ ಮತ್ತಿಹಳ್ಳಿ ಗ್ರಾಮಗಳ 450 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ Land title deed distribution program for over 450 families in Kyasanur and Mattihalli villages

ಲೋಕದರ್ಶನ ವರದಿ 

ಹಾನಗಲ್ 15 : ಸ್ವಂತ ಮನೆಯಲ್ಲಿದ್ದರೂ ದಾಖಲೆಗಳಿಲ್ಲದ ಕಾರಣ ಯಾವುದೇ ಸಮಯದಲ್ಲಿ ಒಕ್ಕಲೇಳುವ ಭಯದಲ್ಲಿದ್ದ ತಾಲೂಕಿನ 13 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಭೂಗ್ಯಾರಂಟಿ ಮೂಲಕ ನೆಮ್ಮದಿಯಿಂದ ಬದುಕು ನಡೆಸಲು ಅಧಿಕೃತ ದಾಖಲೆ ನೀಡಿ ಮನೆ ಹಕ್ಕುಪತ್ರ ಒದಗಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ತಾಲೂಕಾಡಳಿತದಿಂದ ಚಿಕ್ಕಾಂಶಿ ಹೊಸೂರು, ಕ್ಯಾಸನೂರು ಹಾಗೂ ಮತ್ತಿಹಳ್ಳಿ ಗ್ರಾಮಗಳ 450 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ತಾಲೂಕಿನ 8 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಚಾಲನೆ ಪಡೆದಿದೆ.

ಇನ್ನೂ ನಾಲ್ಕೈದು ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ಒದಗಿಸುವ ಕಾರ್ಯದಲ್ಲಿ ತಾಲೂಕಾಡಳಿತ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಇದು ನಮ್ಮ 6 ನೇ ಗ್ಯಾರಂಟಿ. ಹಕ್ಕುಪತ್ರ ನೀಡುವಾಗ ಇ-ಸ್ವತ್ತು, ನೋಂದಣಿ ಪತ್ರದ ಜೊತೆಗೆ ಕಾನೂನು ರೀತಿಯ ಎಲ್ಲ ದಾಖಲೆ ನೀಡಲಾಗುತ್ತಿದೆ. ಕೆಲ ಫಲಾನುಭವಿಗಳು ಮನೆಯ ಕರ ತುಂಬದ ಕಾರಣ ತಡವಾಗಿದೆ. ಪಂಚಾಯಿತಿಗೆ ಮನೆಗಳ ಕರ ಪಾವತಿ ಗ್ರಾಮದ ಹಿತ ಕಾಪಾಡಿ, ತಮ್ಮ ಹಕ್ಕುಪತ್ರವನ್ನೂ ಪಡೆಯಿರಿ ಎಂದರು. 

  ತಾಲೂಕಾ ತಹಶೀಲ್ದಾರ್ ರೇಣುಕಾ ಎಸ್‌. ಮಾತನಾಡಿ ಮನೆ ಇದ್ದರೂ ಅದರ ಹಕ್ಕಿಗಾಗಿ ಕಾಯಬೇಕಾದ ಫಲಾನುಭವಿಗಳಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದೆ. ನಾಲ್ಕೈದು ದಶಕಗಳಿಂದ ಭಯದಲ್ಲಿಯೇ ತಮ್ಮ ಮನೆಯಲ್ಲಿ ವಾಸಿಸುವಂತಾದ ಜನರು ಈಗ ಭಯಮುಕ್ತರಾಗಿದ್ದಾರೆ. ಈಗ ಇದೇ ಮನೆ ಮೇಲೆ ತಮ್ಮ ಹಕ್ಕು ಪ್ರತಿಪಾದಿಸಿ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದ್ದು, ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಶ್ರೇಯಸ್ಸು ಹಾನಗಲ್ ತಾಲೂಕಿನದ್ದು ಎಂದರು. 

  ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಮುಖಂಡರಾದ ಈರಣ್ಣ ಬೈಲವಾಳ, ವೀರಭದ್ರಗೌಡ ಪಾಟೀಲ, ಶಿವಾನಂದಪ್ಪ ಈಳಿಗೇರ, ಹರೀಶ ಈಳಿಗೇರ, ಮಲ್ಲಿಕಾರ್ಜುನಗೌಡ ಪಾಟೀಲ, ಸದಾಶಿವಗೌಡ ಪಾಟೀಲ, ನಾಗರಾಜ ಗಾಜೀಪುರ, ಹರೀಶ ಈಳಿಗೇರ, ರಾಜೇಂದ್ರ ರಡ್ಡೇರ, ರಾಜಕುಮಾರ ಜೋಗಪ್ಪವರ, ಮಾರ್ತಾಂಡಪ್ಪ ಮಣ್ಣಮ್ಮನವರ, ಮಾರುತಿ ಕಮಾಟಿ ಸೇರಿದಂತೆ ಅನೇಕರಿದ್ದರು.