ಕೋಟ್ಯಂತರ ಮೌಲ್ಯದ ಭೂದಾನ: ಓಸ್ವಾಲ್ ಕುಟುಂಬಕ್ಕೆ ಗೌರವ
Land donation worth crores: Honor for the Oswal family
ಮುದ್ದೇಬಿಹಾಳ 03: ದಾನಗಳಲ್ಲಿ ವಿದ್ಯಾದಾನವೇ ಶ್ರೇಷ್ಠವಾದುದು. ಇಂತಹ ಮಹತ್ವದ ದಾನ ಕಾರ್ಯದಲ್ಲಿ ಮುದ್ದೇಬಿಹಾಳ ಪಟ್ಟಣದ ಓಸ್ವಾಲ್ ಕುಟುಂಬ ಸದಾ ಮುಂಚೂಣಿಯಲ್ಲಿದೆ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.
ಪಟ್ಟಣದ ಹಲಗೇರಿ ರಸ್ತೆಯಲ್ಲಿರುವ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಶ್ರೀಮತಿ ಪಾರ್ವತಿಬಾಯಿ ಭೋರ್ಮಲ್ ಓಸ್ವಾಲ್ (ಜೈನ್) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಓಸ್ವಾಲ್ ಕುಟುಂಬ ದಾನವಾಗಿ ನೀಡಿದ ಭೂಮಿಯಲ್ಲಿಯೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದೇ ರೀತಿಯಾಗಿ ಮುದ್ದೇಬಿಹಾಳದ ಎಂಜಿನಿಯರಿಂಗ್ ಕಾಲೇಜಿಗೆ ಮಾತೋಶ್ರೀ ಗಂಗಮ್ಮನವರು ತಮ್ಮ ಭೂಮಿಯನ್ನು ದಾನವಾಗಿ ನೀಡಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರೀದೀಪವಾಗಿದ್ದಾರೆ ಎಂದು ನಾಡಗೌಡ ಹೇಳಿದರು.
ಓಸ್ವಾಲ್ ಕುಟುಂಬವು ಸರ್ಕಾರಿ ಐಟಿಐ ಸಂಸ್ಥೆಗೆ ಭೂಮಿ ನೀಡುವುದರ ಜೊತೆಗೆ ಆಲಮಟ್ಟಿ ರಸ್ತೆಯಲ್ಲಿರುವ ಪದವಿ ಕಾಲೇಜಿಗೂ ಮೂರು ಎಕರೆ ಭೂಮಿಯನ್ನು ದಾನವಾಗಿ ನೀಡಿದೆ. ಇದರಿಂದ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶ ದೊರೆತಿದೆ ಎಂದರು.
“ಭೂದಾನ ಮಾಡಿದ ಕುಟುಂಬದ ಸೇವೆ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ಈ ಸಂಸ್ಥೆಯ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಹಾಗೂ ಕೌಶಲ್ಯವನ್ನು ಗಳಿಸಿ ಜೀವನದಲ್ಲಿ ಸಾಧನೆ ಮಾಡಬೇಕು. ಆಗ ಮಾತ್ರ ದಾನಿಗಳ ಉದ್ದೇಶ ಈಡೇರಿದಂತಾಗುತ್ತದೆ,” ಎಂದು ಶಾಸಕ ನಾಡಗೌಡ ಹೇಳಿದರು.
ಐಟಿಐ-ಕೈಗಾರಿಕಾ ತರಬೇತಿ ಇಲಾಖೆಯ ಬೆಳಗಾವಿ ವಿಭಾಗೀಯ ಉಪನಿರ್ದೇಶಕ ಡಾ. ಬಸವಪ್ರಭು ಹಿರೇಮಠ ಮಾತನಾಡಿ, ಮುದ್ದೇಬಿಹಾಳ ತಾಲೂಕಿನಲ್ಲಿ ಬಾಲಕಿಯರು ಹಾಗೂ ಬಾಲಕರಿಗಾಗಿ ಪ್ರತ್ಯೇಕ ಕೈಗಾರಿಕಾ ತರಬೇತಿ ಸಂಸ್ಥೆಗಳು ಇರುವುದು ವಿಶೇಷವಾಗಿದೆ. 1991ರಲ್ಲಿ ನಾಲತವಾಡದಲ್ಲಿ ಮಹಿಳಾ ಕೈಗಾರಿಕಾ ತರಬೇತಿ ಕೇಂದ್ರವನ್ನು ಅಂದಿನ ಕಾರ್ಮಿಕ ಸಚಿವರಾಗಿದ್ದ ಸಿ.ಎಸ್. ನಾಡಗೌಡ ಅವರೇ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರಿಗೆ ಕೇವಲ ಪದವಿ ಶಿಕ್ಷಣ ನೀಡಿದರೆ ಸಾಲದು. ಉದ್ಯೋಗ ಪಡೆಯಲು ಕೌಶಲ್ಯವೂ ಅತ್ಯಗತ್ಯ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಯುವಕರು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೈಗಾರಿಕಾ ತರಬೇತಿಯ ಮೂಲಕ ಯುವಕರಿಗೆ ಉದ್ಯೋಗ ಹಾಗೂ ಸ್ವಾವಲಂಬನೆಗೆ ದಾರಿ ಮಾಡಿಕೊಡಬಹುದು ಎಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 