ಲಕ್ಷ್ಮಣ ರೇಖೆ ನಾಟಕ ಪ್ರದರ್ಶನ

ಲಕ್ಷ್ಮಣ ರೇಖೆ ನಾಟಕ ಪ್ರದರ್ಶನ   Lakshman Rekha drama performance

ಧಾರವಾಡ 27: ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಕನ್ನಡ ಶಕ್ತಿ ಕೇಂದ್ರವಾಗಿ 53 ವರ್ಷ ಕವಿವ ಸಂಘವನ್ನು ಮುನ್ನಡೆಸಿದ್ದರು. ಕವಿವ ಸಂಘ ಕನ್ನಡದ ಗುಡಿಯಂತೆ ಬೆಳೆದು, ಕನ್ನಡ ಭಾಷೆಯ ಸಂಸ್ಕೃತಿಯ ಸಂವರ್ಧನೆಗಾಗಿ ಕಾರ್ಯ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ವಿಜಯಪುರದ ಡಿವೈಎಸ್ಪಿ ಡಾ. ಬಸವರಾಜ ಎಲಿಗಾರ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ತಿಂಗಳ ಪೂರ್ಣ ಕಾರ್ಯಕ್ರಮದಲ್ಲಿ ಲಕ್ಷ್ಮಣ ರೇಖೆ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ಸ್ವೀಕರಿಸಿ, ಮಾತನಾಡಿದರು. 

ಧಾರವಾಡ ವಿದ್ಯಾಕಾಶಿ ಎನ್ನಿಸಿಕೊಳ್ಳುವುದಕ್ಕೆ ಮೂಲ ತಾಯಿ ಬೇರೆ ಕವಿವ ಸಂಘ. ಈ ಸಂಸ್ಥೆ ಕಟ್ಟಿ ಬೆಳೆಸಲು ರಾ.ಹ. ದೇಶಪಾಂಡೆ ಅವರಿಂದ ಹಿಡಿದು ನಾಡೋಜ ಡಾ. ಪಾಟೀಲ ಪುಟ್ಟಪ್ಪನವರಂತಹ ಮಹನೀಯರ ತ್ಯಾಗ ಸೇವೆ ದೊಡ್ಡದು. ಈಗಿನ ಪದಾಧಿಕಾರಿಗಳು ಕವಿವ ಸಂಘದ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಪೋಷಿಸಿ ಬೆಳೆಸುತ್ತಿದ್ದಾರೆ. ಸಂಘದ ಪದಾಧಿಕಾರಿಗಳು ಇಡೀ ನವೆಂಬರ್ ತಿಂಗಳು ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸುವುದು ಶ್ರಮದಾಯಕವಾದದ್ದು. ಕಾರಣ ಅವರನ್ನು ಅಭಿನಂದಿಸುತ್ತೇನೆ.  

ಕವಿವ ಸಂಘ ಇಂತಹ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸುತ್ತಿದ್ದು, ಈ ನಾಡಿನ ಆಸ್ತಿ ಎನಿಸಿದ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಭಾಗವಹಿಸಬೇಕು. ಇಂದು ಯುವಶಕ್ತಿ ಸಂಕೀರ್ಣ ಸ್ಥಿತಿಯಲ್ಲಿದ್ದು, ಅವರ ಮೇಲೆ ಸಾಮಾಜಿಕ ಜಾಲತಾಣಗಳು ಆಕ್ರಮಣ ಮಾಡುತ್ತಿರುವುದು ದುರಂತವಾಗಿದೆ. ಇದರಿಂದ ಯುವಶಕ್ತಿ ದಾರಿ ತಪ್ಪುವ ಕೆಲಸವಾಗುತ್ತಿದೆ. ಕನ್ನಡ ಭಾಷೆ ಸತ್ವಶಾಲಿ ಭಾಷೆ. ಅದರ ಉಳಿವು ನಿಮ್ಮ ಮೇಲೆ ಇದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಾಗ ಹಿಂದಿಗೆ ಕೇವಲ ಮೂರು ಮಾತ್ರ ಸಂದಿದ್ದವು. ಇಂದು ಹಿಂದಿಗೆ 13 ಜ್ಞಾನಪೀಠ ಪ್ರಶಸ್ತಿ ಬಂದಿವೆ. ಆದರೆ ಕನ್ನಡಿಗರಾದ ನಾವು ಇನ್ನೂ ಎಂಟರಲ್ಲಿ ಇದ್ದೇವೆ ಹೊರತು, ನಮಗೆ 9ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಡುವಲ್ಲಿ ನಾವು ವಿಫಲರಾಗಿದ್ದೇವೆ. ಈ ಸ್ಥಿತಿಗೆ ಕಾರಣವನ್ನು ಯುವಶಕ್ತಿ ಹುಡುಕಬೇಕಿದೆ ಎಂದರು. 

ನಾಟಕಕ್ಕೆ ಚಾಲನೆ ನೀಡಿದ ಎಂ.ಎಂ. ಚಿಕ್ಕಮಠ ಮಾತನಾಡಿ. ನಾಟಕಗಳು ಸಮಾಜದ ಪ್ರತಿಬಿಂಬಗಳು. ಸೃಜನಶೀಲತೆ, ಸಂವಹನ ಕೌಶಲ್ಯವನ್ನು ನಾಟಕಗಳು ಬಿಂಬಿಸುತ್ತವೆ. ಜೊತೆಗೆ ತರ್ಕಬದ್ಧ ಚಿಂತನೆ, ಭಾವನಾತ್ಮಕ ಬೆಳವಣಿಗೆ ಹೆಚ್ಚಿಸಿ ನಮ್ಮ ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ನಾಟಕ್ಕಿದೆ. ನಾಟಕಗಳು ಒಂದು ದೃಷ್ಟಿಯಿಂದ ಎಲ್ಲವನ್ನೂ ಒಳಗೊಂಡ ಕಲೆಯಾಗಿದೆ. ನಾಟಕಗಳಲ್ಲಿ ಜೀವಂತಿಕೆ ಇದೆ ಎಂದು ಹೇಳಿದರು. 

ಕವಿವ ಸಂಘದ ವತಿಯಿಂದ ರಂಗ ಕಲಾವಿದರಾದ ಹುಬ್ಬಳ್ಳಿಯ ಮಹಾಂತೇಶ ಮಾಟೂರ ಹಾಗೂ ನಿರ್ಮಲಾ ಶಿಂಧೆ (ಮಾಟೂರ) ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಚನ್ನಬಸಪ್ಪ ಕಾಳೆ ಇದ್ದರು. ಡಾ ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ, ಮಾತನಾಡಿದರು. ವೀರಣ್ಣ ಒಡ್ಡೀನ ಸನ್ಮಾನ ಪತ್ರ ವಾಚಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ಡಾ. ಶೈಲಜಾ ತ. ಅಮರಶೆಟ್ಟಿ, ಡಾ. ಧನವಂತ ಹಾಜವಗೋಳ, ಕೆ.ಎಚ್‌. ನಾಯಕ, ಗದಿಗೆಯ್ಯಾ ವಿ. ಹಿರೇಮಠ, ವಿಜಯೇಂದ್ರ ಅರ್ಚಕ ಇದ್ದರು. ನಂತರ ರಾಘವೇಂದ್ರ ಜೋಶಿ ರಚನೆಯ, ಚನ್ನಬಸಪ್ಪ ಕಾಳೆ ನಿರ್ದೇಶನದ ‘ಲಕ್ಷ್ಮಣ ರೇಖೆ’ ನಾಟಕ ನಟರಾಜ ಕಲಾ ಬಳಗದವರಿಂದ ಪ್ರದರ್ಶನಗೊಂಡಿತು.