ಮೂಲಸೌಕರ್ಯಗಳ ಕೊರತೆ: ಲಗಲೂರು ಗ್ರಾಮಸ್ಥರ ಅಸಮಾಧಾನ

ಮೂಲಸೌಕರ್ಯಗಳ ಕೊರತೆ: ಲಗಲೂರು ಗ್ರಾಮಸ್ಥರ ಅಸಮಾಧಾನ  Lack of infrastructure: Discontent of Lagalur villagers

ಯಲಬುರ್ಗಾ, ಆ. 28: ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿ ಅನುದಾನ ನೀಡುತ್ತಿದ್ದರೂ, ಅವುಗಳ ಸಮರ​‍್ಕ ಸದ್ಬಳಕೆ ಹಾಗೂ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಇದಕ್ಕೆ ಯಲಬುರ್ಗಾ ತಾಲೂಕು ಕೇಂದ್ರದ ಸಮೀಪದ ಲಗಲೂರು ಗ್ರಾಮದ ಸ್ಥಿತಿಯೇ ಸಾಕ್ಷಿಯಾಗಿದೆ.  

ಗ್ರಾಮದಲ್ಲಿ ಅನೇಕ ಕುಟುಂಬಗಳು ವಾಸಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿಂದ ಹಲವು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ. ಗ್ರಾಮದಲ್ಲಿ ಸ್ವಚ್ಛತೆ, ಚರಂಡಿ, ಕುಡಿಯುವ ನೀರು, ಶೌಚಾಲಯ ಹಾಗೂ ಸಾರಿಗೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳು ಸಮರ​‍್ಕವಾಗಿ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  

ಸ್ವಚ್ಛತಾ ಕಾರ್ಯಕ್ಕೆ ನಿರ್ಲಕ್ಷ್ಯ  

ಗ್ರಾಮದಲ್ಲಿ ನಿಯಮಿತವಾಗಿ ಕಸ ವಿಲೇವಾರಿ ನಡೆಯುತ್ತಿಲ್ಲ. ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡದಿರುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿಯೂ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ದುರ್ವಾಸನೆ ಬೀರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.  

ಸ್ವಚ್ಛತೆಯ ಕೊರತೆಯಿಂದ ಮಕ್ಕಳು, ವೃದ್ಧರು ಸೇರಿದಂತೆ ಗ್ರಾಮಸ್ಥರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಆತಂಕವೂ ಗ್ರಾಮಸ್ಥರನ್ನು ಕಾಡುತ್ತಿದೆ. ಕೂಡಲೇ ಸ್ವಚ್ಛತಾ ಅಭಿಯಾನ ಕೈಗೊಂಡು ಚರಂಡಿಗಳನ್ನು ಸ್ವಚ್ಛಗೊಳಿಸಿ, ಕಸವನ್ನು ಸಮರ​‍್ಕವಾಗಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.