ಅರವಳಿಕೆ ಸ್ತ್ರೀರೋಗ ತಜ್ಞರ ಮಧ್ಯದಲ್ಲಿ ಸಮನ್ವಯ ಕೊರತೆ

ಅರವಳಿಕೆ ಸ್ತ್ರೀರೋಗ ತಜ್ಞರ ಮಧ್ಯದಲ್ಲಿ ಸಮನ್ವಯ ಕೊರತೆ Lack of coordination among obstetrician-gynecologists

ಜಿಲ್ಲಾಸ್ಪತ್ರೆಗೆ ಗರ್ಭಿಣಿಯರ ಶಿಫಾರಸ್ಸು, ಚಿಕಿತ್ಸೆಗಾಗಿ ಗರ್ಭಿಣಿಯರ ಪರದಾಟ? ಕಣ್ಣು ಮುಚ್ಚಿ ಕುಳಿತ ಆರೋಗ್ಯ ಇಲಾಖೆ, 

ಸಂತೋಷ್ ಕುಮಾರ್ ಕಾಮತ್  

ಮಾಂಜರಿ: ಕೇಂದ್ರ ಮತ್ತು ರಾಜ್ಯ ಸರಕಾರ  ತಾಯಿ-ಮಗುವಿನ ಮರಣ ಪ್ರಮಾಣ ತಗ್ಗಿಸುವದಕ್ಕಾಗಿ ಹಾಗೂ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದಕ್ಕಾಗಿ  100 ಹಾಸಿಗೆಗಳ ಆಸ್ಪತ್ರೆಯನ್ನು ಪಟ್ಟಣದ  ಹೊರವಲಯದ ಬಾಣಂತಿಕೋಡಿಯಲ್ಲಿ ತಾಯಿ-ಮಗು ಆಸ್ಪತ್ರೆಯನ್ನು  32 ಕೋಟಿ ರೂಗಳಲ್ಲಿ ಪ್ರಾರಂಭಿಸಲಾಗಿದೆ. ತಾಯಿ-ಮಗು ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಜಯಲಕ್ಷ್ಮೀ ಮುಸಾಳೆ ಹಾಗೂ  ಅರವಳಿಕೆ ತಜ್ಞ ಡಾ.ಅಭೀಜಿತ ಕೊಕರೆ ಅವರ  ನಡುವೆ ಸಮನ್ವಯ ಕೊರತೆಯಿಂದಾಗಿ ತಾಯಿ-ಮಗು ಆಸ್ಪತ್ರೆಗೆ ಆಗಮಿಸುವ ಬಡ ಗರ್ಭೀಣಿಯರಿಗೆ ಇಲ್ಲಿ ಚಿಕಿತ್ಸೆ ಮರೀಚೀಕೆಯಾಗಿದೆ. ಆಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಇಲ್ಲಾ ಬೇರೆ ಕಡೆಗೆ  ಕಳುಹಿಸುತ್ತಿದ್ದಾರೆ. ಬೆಳಗಾವಿ ಆಸ್ಪತ್ರೆಗೆ ಗರ್ಭಿಣಿಯರನ್ನು ಕಳುಹಿಸುವದಾದರೆ ಇಲ್ಲಿ ತಾಯಿ-ಮಗು ಆಸ್ಪತ್ರೆ ಇರುವದಾದರು ಏಕೆ ಎಂದು  ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. 

ಬಡವರಿಗೆ ಗುಣ ಮಟ್ಟದ ಆರೋಗ್ಯ ಸೇವೆ ನೀಡುವವದಕ್ಕಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ವಿಶೇಷ ಕಾಳಜಿ ವಹಿಸಿ ಇಲ್ಲಿ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ಬಡವರಿಗೆ ಸೇವೆ ನೀಡದೆ ಬಡ ಗರ್ಭಿಣಿಯರ ರಕ್ತ ಹೀರುವ ಆಸ್ಪತ್ರೆಯಾಗಿದೆ ಎಂದು ಗರ್ಭಿಣಿಯೊಬ್ಬರು ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಕುಗ್ಗಿದ ಹೆರಿಗೆ ಪ್ರಮಾಣ: ಪಟ್ಟಣದಲ್ಲಿದ್ದ  ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ  ಹಾಗೂ ಸಹಜ ಹೇರಿಗೆಗಳು ಸೇರಿ ಒಟ್ಟು 250 ಕ್ಕೂ ಹೆಚ್ಚು ಹೆರಿಗೆಗಳನ್ನು  ಮಾಡಲಾಗುತ್ತಿತ್ತು.ಆದರೆ ಇದೀಗ ಇಲ್ಲಿನ ತಾಯಿ-ಮಗು ಆಸ್ಪತ್ರೆಯಲ್ಲಿ ಎಲ್ಲಾ ರೀತಿ ಸೌಲಭ್ಯಗಳನ್ನು ನೀಡಿದರು  ಕೇವಲ 50 ಮಾತ್ರ ಹೆರಿಗೆ ಮಾಡಿಸಲಾಗುತ್ತಿದೆ.ಹೈಟೇಕ್ ವ್ಯವಸ್ಥೆ  ಇರುವ ತಾಯಿ-ಮಗು ಆಸ್ಪತ್ರೆಯಲ್ಲಿ ಕೇವಲ 50 ಹೆರಿಗೆಗಳು ಮಾಡಿಸುತ್ತಿದ್ದಾರೆ ಬೆಳಗಾವಿಗೆ ಗರ್ಭೀಣಿಯರನ್ನು  ಶಿಫಾರಸ್ಸು ಮಾಡುತ್ತಿದ್ದಾರೆ.ಹೆರಿಗೆಗಳ ಸಂಖ್ಯೆ ಕುಸಿತವಾದರು ಕ್ರಮ ಕೈಗೊಳ್ಳಬೇಕಾದ ಡಿಎಚ್‌ಓ, ಹಾಗೂ ತಾಲೂಕ  ಮಟ್ಟದ ಆರೋಗ್ಯ ಇಲಾಖೆ  ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವದು ಜನರ ಪ್ರಶ್ನೆಯಾಗಿದೆ. ಈ ಹಿಂದೆ ಚಿಕ್ಕೋಡಿ ತಾಯಿ-ಮಗು ಆಸ್ಪತ್ರೆಗೆ ಡಿಎಚ್‌ಓ,  ಅವರು ಆಗಮಿಸಿದಾಗ ಇಲ್ಲಿನ ಸಮಸ್ಯೆ ಕುರಿತು ಸಾರ್ವಜನಿಕರು ಅವರ  ಗಮನಕ್ಕೆ ತಂದರೂ ಇಲ್ಲಿವರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಅಧಿಕಾರಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. 

ಹಣ ವಸೂಲಿ: ಸಹಜ ಹೆರಿಗೆ ಮಾಡಿಸಲು ಇಲ್ಲಿನ ವೈದ್ಯರು ಹೆಚ್ಚಿನ ಆದ್ಯತೆ ನೀಡಬೇಕು. ಆದರೆ ಜನರ ಹಣದ ಆಸೆೆಗಾಗಿ ಶಸ್ತ್ರಚಿಕಿತ್ಸೆ ಮಾಡಿಸಲು ಸ್ತ್ರೀರೋಗ ತಜ್ಞೆ  ಹೆಚ್ಚಿನ ಒಲವು ತೋರುತ್ತಿದ್ದಾರೆ. ಸೀಜರಿನ್ ಮಾಡಿದರೆ ಸಾರ್ವಜನಿಕರಿಂದ 5 ಸಾವಿರಕ್ಕೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗರ್ಭೀಣಿಯರು ಆರೋಪಿಸಿದ್ದಾರೆ. ಸಾರ್ವಜನಿಕರಿಂದ ಇಷ್ಟೆಲ್ಲಾ ಹಣ ವಸೂಲಿ ಮಾಡುತ್ತಿದ್ದರು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ಇರುವದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ವೈದ್ಯರಿಗೆ ಕಾಯುತ್ತಿರುವ ಗರ್ಭೀಣಿ: ತಾಯಿ-ಮಗು ಆಸ್ಪತ್ರೆಗೆ ಆಗಮಿಸುವ ಗರ್ಭಿಣಿಯರು ಸ್ತ್ರೀರೋಗ ತಜ್ಞರು  ಮತ್ತು ಅರವಳಿಕೆ ತಜ್ಞರು ಯಾವಾಗ ಬರುತ್ತಾರೆ ಎಂದು ಪ್ರತಿ ನಿತ್ಯ ದಾರಿ ಕಾಯುವಂತಾಗಿದೆ. ಇನ್ನು ಕೆಲ ಗರ್ಭಿಣಿಯರು ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಖಾಸಗಿ ಹಾಗೂ ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗುತ್ತಾರೆ. ಬಡವರು ಮಾತ್ರ ವೈದ್ಯರು ಬರುವವರಿಗೆ ಕಾಯ್ದು ಕುಳಿತುಕೊಳ್ಳುವದು ಇಲ್ಲಿ ಪ್ರತಿನಿತ್ಯ ಮಾಮೂಲಾಗಿದೆ. 

ಇಷ್ಟೆಲ್ಲಾ ಆವಾಂತರಗಳು ತಾಯಿ-ಮಗು ಆಸ್ಪತ್ರೆಯಲ್ಲಿ ನಡೆಯುತ್ತಾ ಇದ್ದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೆ ಕ್ರಮಕ್ಕೆ ಮುಂದಾಗದೆ ಇರುವದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮುಂದೆಯಾದರು ತಾಯಿ-ಮಗು ಆಸ್ಪತ್ರೆಯಲ್ಲಿನ ಸಮಸ್ಯೆ ಬಗೆಹರಿಸಲು ಮುಂದಾಗುತ್ತಾರೆ ಹೇಗೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ. 

ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದಲ್ಲಿ ತಾಯಿ-ಮಗು ಆಸ್ಪತ್ರೆ ಪ್ರಾರಂಭಿಸಲಾಗಿದೆ. ತಾಯಿ-ಮಗು ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಜಯಲಕ್ಷ್ಮೀ ಮುಸಾಳೆ ಹಾಗೂ ಅರವಳಿಕೆ ತಜ್ಞ ಡಾ.ಅಭೀಜಿತ ಕೊಕರೆ ಅವರ ನಡುವೆ ಸಮನ್ವಯದ ಕೊರತೆಯಿದೆ. ಅದಕ್ಕಾಗಿ ಬಹಳಷ್ಟು ಗರ್ಭಿಣಿಯರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಈ ಹಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ 250ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿದ್ದವು. ಇದೀಗ ಇಲ್ಲಿನ ತಾಯಿ-ಮಗು ಆಸ್ಪತ್ರೆಯಲ್ಲಿ ಕೇವಲ 50 ಮಾತ್ರ ಹೆರಿಗೆ ಮಾಡಿಸಲಾಗುತ್ತಿದೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಡವರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು. ಇಲ್ಲದೆ ಹೋದಲ್ಲಿ ಉಗ್ರವಾದ ಹೋರಾಟ ಮಾಡಲಾಗುವದು. 

-ಅಪ್ಪಾಸಾಹೇಬ ಶ್ರೀಪತಿ ಕುರಣೆ 

ಸಮಾಜ ಸೇವಕರು 

ಚಿಕ್ಕೋಡಿ ತಾಯಿ-ಮಗು ಆಸ್ಪತ್ರೆಯಲ್ಲಿನ ಸಮಸ್ಯೆ ಹೋಗಲಾಡಿಸಲು ಕ್ರಮ ಜರುಗಿಸಲಾಗುವದು.ಜನರಿಗೆ ಸೇವೆ ನೀಡಲು ಹೆಚ್ಚಿನ ಆಧ್ಯತೆ ನೀಡಲಾಗುವದು. 

ಡಾ.ಐ.ಪಿ.ಗಡಾದ,ಡಿಎಚ್ ಓ ಬೆಳಗಾವಿ